

ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಎರಡನೇ ಹಂತದ ಚುನಾವಣೆಗೆ ಭಾನುವಾರ ಸಂಜೆ ತೆರೆ ಬೀಳಲಿದೆ. ಈ ಹಿನ್ನೆಲೆಯಲ್ಲಿ ಪ್ರಚಾರದ ಅಖಾಡದಲ್ಲಿ ಅಬ್ಬರಿಸಿ ಬಹುದೊಡ್ಡ ಹವಾ ಸೃಷ್ಟಿಗೆ ಬಿಜೆಪಿ ಸನ್ನದ್ಧವಾಗಿದೆ.
ಶಕ್ತಿ ಕೇಂದ್ರ (ಜಿ.ಪಂ. ಕ್ಷೇತ್ರ), ಮಂಡಲಗಳು, ಪಟ್ಟಣಗಳನ್ನು ಕೇಂದ್ರವಾಗಿಸಿಕೊಂಡು ಭಾನುವಾರ ಬೆಳಗ್ಗೆ ಪಾದಯಾತ್ರೆ ಹಾಗೂ ಬೈಕ್ ರ‌್ಯಾಲಿಗಳನ್ನು ಹಮ್ಮಿಕೊಂಡಿದೆ. ಬೀದರ್‌ನಿಂದ ಬೆಳಗಾವಿವರೆಗೆ 14 ಲೋಕಸಭೆ ಕ್ಷೇತ್ರಗಳ ತಲಾ 50 ಸ್ಥಳಗಳಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಬಹಿರಂಗ ಪ್ರಚಾರವನ್ನು ವಿಭಿನ್ನವಾಗಿ ಅಂತ್ಯಗೊಳಿಸಲು ಕಾರ್ಯಕರ್ತರು ಉತ್ಸಾಹದಿಂದ ಸಜ್ಜಾಗಿದ್ದಾರೆ.
ರಾಜ್ಯದ ಎಲ್ಲ ಲೋಕಸಭಾ ಸ್ಥಾನಗಳನ್ನು ಗೆಲ್ಲುವ ದೃಷ್ಟಿಯಿಂದ ಕೊನೆಯ ದಿನದ ಪ್ರಚಾರಕ್ಕೆ ಈ ಯೋಜನೆ ರೂಪಿಸಲಾಗಿದೆ. 14 ಲೋಕಸಭೆ ಕ್ಷೇತ್ರಗಳಲ್ಲಿ ಭಾನುವಾರ ಪಾದಯಾತ್ರೆ, ಬೈಕ್ ರ‌್ಯಾಲಿ ನಡೆಯಲಿದ್ದು, ಪಕ್ಷದ ಹಿರಿಯ, ಕಿರಿಯ ನಾಯಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್‌ಕುಮಾರ್ ಮಾಹಿತಿ ನೀಡಿದ್ದಾರೆ.
ಪ್ರಚಾರ ಪ್ರಮುಖರು, ಸಾಮಾಜಿಕ ಕಾರ್ಯಕರ್ತರ ಮನೆಯಲ್ಲಿ ಉಪಾಹಾರ, ಬಳಿಕ ಸ್ಥಳೀಯ ಮಹನೀಯರ ಪುತ್ಥಳಿಗೆ ಮಾಲಾರ್ಪಣೆ, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮಾಧ್ಯಮಗೋಷ್ಠಿ, ಮನೆ, ಮನೆಗಳ ಸಂಪರ್ಕ, ಬೈಕ್ ರ‌್ಯಾಲಿ ಮತ್ತು ಪಾದಯಾತ್ರೆ ಚಟುವಟಿಕೆಗಳನ್ನು ಕೊನೇ ದಿನದ ಪ್ರಚಾರ ಒಳಗೊಂಡಿದೆ.
ಮೇ 7ರಂದು ನಡೆಯಲಿರುವ ಮತದಾನ ಹೆಚ್ಚಿನ ಪ್ರಮಾಣದಲ್ಲಿ ನಡೆಸಲು ಜನರಲ್ಲಿ ಜಾಗೃತಿ ಮೂಡಿಸುವುದು, ಆದಷ್ಟು ಅಪರಾಹ್ನ 12ರೊಳಗೆ ಮತ ಚಲಾಯಿಸುವಂತೆ ನೋಡಿಕೊಳ್ಳುವುದು ಈ ಕಾರ್ಯಕ್ರಮಗಳ ಮತ್ತೊಂದು ಮುಖ್ಯ ಉದ್ದೇಶವಾಗಿದೆ.
ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಜಗದೀಶ ಶೆಟ್ಟರ್, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಸಂಸದರು, ಶಾಸಕರು, ಅಭ್ಯರ್ಥಿಗಳು, ಪಕ್ಷದ ರಾಜ್ಯ ಪದಾಧಿಕಾರಿಗಳು ಪಾಲ್ಗೊಂಡು ಕೇಸರಿಪಡೆಯನ್ನು ಹುರಿದುಂಬಿಸಲಿದ್ದಾರೆ.
ವಿವಿಧ ಮಂಡಗಳು, ಪಟ್ಟಣ, ಶಕ್ತಿ ಕೇಂದ್ರಗಳಲ್ಲಿ ನಡೆಯಲಿರುವ ಪಾದಯಾತ್ರೆ, ರ‌್ಯಾಲಿಗಳಲ್ಲೂ ಶಾಸಕರು, ಮಾಜಿ ಶಾಸಕರು, ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಪಕ್ಷದ ಪರ ವಾತಾವರಣ, ಪ್ರಧಾನಿ ಮೋದಿ ಪರ ಅಲೆಯಿದೆ ಎಂಬ ಸಂದೇಶ ಹರಡಲಿದ್ದಾರೆ.
ರಾಜ್ಯ ಸರ್ಕಾರ ತೆರಿಗೆಗಳ ಹೊರೆ ಏರಿದೆ ಎಂದು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಐದು ಗ್ಯಾರಂಟಿಗಳ ಪ್ರಭಾವ ತಗ್ಗಿಸಲು ಕಮಲಪಡೆ ಕಸರತ್ತು ನಡೆಸಿದೆ. ಮೇ 2 ರಿಂದ 4ರವರೆಗೆ ನಡೆದ ಮನೆ, ಮನೆ ಭೇಟಿ ಹಾಗೂ ಭಾನುವಾರ ನಡೆಯಲಿರುವ ಕೊನೇ ದಿನದ ಮನೆಗಳ ಸಂಪರ್ಕ ಕಾರ್ಯಕ್ರಮಕ್ಕೂ ಇದೇ ಪ್ರಧಾನ ಕಾರ್ಯಸೂಚಿಯಾಗಿದೆ.
ಗೃಹಲಕ್ಷ್ಮಿ ಯೋಜನೆಯಡಿ ಎರಡು ಸಾವಿರ ರೂ. ಕೊಟ್ಟಿದೆ. ಆದರೆ ವಿದ್ಯುತ್, ನೀರಿನ ತೆರಿಗೆ, ಕಂದಾಯ ಶುಲ್ಕಗಳ ರೂಪದಲ್ಲಿ 10 ಸಾವಿರ ರೂ.ಗಳ ಭಾರ ಹೊರಿಸಿದೆ. ಒಂದು ಕೈಯಿಂದ ಅಲ್ಪ ನೆರವು ನೀಡಿ, ಮತ್ತೊಂದು ಕೈಯಿಂದ ದೊಡ್ಡ ಮೊತ್ತ ಕಿತ್ತುಕೊಳ್ಳುತಿದೆ ಎಂಬ ಮಾಹಿತಿ ನೀಡಿ ಜನರ ಒಲವು ತನ್ನತ್ತ ಸೆಳೆಯಲು ಪಕ್ಷ ಬೆವರಿಳಿಸಿದೆ ಎಂದು ಮೂಲಗಳು ತಿಳಿಸಿವೆ.