ಸುರಕ್ಷತಾ ಕ್ರಮ ಮುಖ್ಯ; ಶೈಕ್ಷಣಿಕ ಚಟುವಟಿಕೆ ಉತ್ಸಾಹ

Editorial
Published on

ಕರೊನಾ ಸೋಂಕಿನ ಹಾವಳಿ ಪರಿಣಾಮ ಕಳೆದ ಹದಿನೆಂಟು ತಿಂಗಳುಗಳಿಂದ ಅಸ್ತವ್ಯಸ್ತಗೊಂಡಿದ್ದ ಶೈಕ್ಷಣಿಕ ಚಟುವಟಿಕೆಗಳು ಮತ್ತೆ ಹಳಿಗೆ ಬರುತ್ತಿರುವುದು ಸಮಾಧಾನದ ಸಂಗತಿ. ಹಲವು ಕ್ಷೇತ್ರಗಳಿಗೆ ಕರೊನಾ ದೊಡ್ಡ ಆಘಾತ ನೀಡಿದ್ದು ಹೌದಾದರೂ, ಶೈಕ್ಷಣಿಕ ವಲಯವಂತೂ ನಲುಗಿ ಹೋಯಿತು. ದೀರ್ಘಾವಧಿ ಕಲಿಕೆ ಪ್ರಕ್ರಿಯೆ ಸ್ತಬ್ಧವಾಗಿದ್ದರಿಂದ ಮಕ್ಕಳ ಗ್ರಹಿಕೆಯ ಶಕ್ತಿ, ಆಸಕ್ತಿ ಎರಡೂ ಕಡಿಮೆಯಾಯಿತು. ಪಾಲಕರ ಪಾಲಿಗೆ ಇದು ಹೊಸ ಸಮಸ್ಯೆ. ಆನ್​ಲೈನ್ ತರಗತಿಗಳು ಆಗಿನ ಸಂದರ್ಭಕ್ಕೆ ಅನಿವಾರ್ಯವಾದರೂ, ದೀರ್ಘಾವಧಿಗೆ ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ಶಿಕ್ಷಣ ತಜ್ಞರು ವ್ಯಕ್ತಪಡಿಸಿದ್ದರು. ಮಕ್ಕಳು ಪರೀಕ್ಷೆ ಇಲ್ಲದೆ ಮುಂದಿನ ತರಗತಿ ಪ್ರವೇಶಿಸಿರುವುದು ಹೌದಾದರೂ, ಜ್ಞಾನದ ವಿಷಯದಲ್ಲಿ ಅಷ್ಟೇ ಪ್ರಮಾಣದಲ್ಲಿ ಮುಂದುವರಿದಿಲ್ಲ ಎಂಬುದು ಕಟು ವಾಸ್ತವ. ಗ್ರಾಮೀಣ ಪ್ರದೇಶಗಳಲ್ಲಂತೂ ಸಮಸ್ಯೆಯ ಸ್ವರೂಪ ಇನ್ನೂ ಗಂಭೀರವಾಗಿದ್ದು, ಶಾಲೆ ಇಲ್ಲದ್ದರಿಂದ ಮಕ್ಕಳನ್ನು ಬಲವಂತವಾಗಿ ದುಡಿಮೆಗೆ ತಳ್ಳಲಾಗಿದೆ.

ಕರೊನಾ 2ನೇ ಅಲೆ ನಿಯಂತ್ರಣಕ್ಕೆ ಬಂದಿರುವುದರಿಂದ ಶಾಲೆ ತರಗತಿಗಳು ಭಾಗಶಃ ಆರಂಭವಾಗಿವೆ. 6ರಿಂದ 8ನೇ ತರಗತಿ ಇಂದಿನಿಂದ (ಸೋಮವಾರ) ಪೂರ್ಣಪ್ರಮಾಣದಲ್ಲಿ ಆರಂಭವಾಗಲಿದ್ದು, ಮಕ್ಕಳು ಮತ್ತು ಪಾಲಕರಲ್ಲಿ ನಿರಾಳತೆ ಮೂಡಿದೆ. ಈಗಾಗಲೇ ಕೆಲ ವಾರಗಳಿಂದ ಶೇ.50ರ ಸಾಮರ್ಥ್ಯದಲ್ಲಿ ತರಗತಿಗಳು ನಡೆಯುತ್ತಿರುವುದರಿಂದ, ಈಗ ಅನುಸರಿಸುತ್ತಿರುವ ಸುರಕ್ಷತಾ ಕ್ರಮಗಳನ್ನೇ ಮತ್ತಷ್ಟು ಪರಿಣಾಮಕಾರಿಯಾಗಿ ಪಾಲಿಸುವ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ ವೇಗ ನೀಡಲು ಅಡ್ಡಿಯಿಲ್ಲ. ಹೊಸ ಪ್ರಕರಣಗಳ ಸಂಖ್ಯೆಯೂ ಕುಸಿದಿರುವುದರಿಂದ ಭಯಪಡುವ ಅವಶ್ಯಕತೆಯಿಲ್ಲ ಎಂದು ಆರೋಗ್ಯ ತಜ್ಞರೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ವರ್ತಮಾನವನ್ನು ಮತ್ತೆ ಭದ್ರವಾಗಿ ಕಟ್ಟುವ, ಭವಿಷ್ಯದ ದಾರಿಯನ್ನು ರೂಪಿಸುವ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನ ನಡೆಯಬೇಕಿದೆ.

ದಸರಾದ ಬಳಿಕ 1ರಿಂದ 5ನೇ ತರಗತಿ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ನವೆಂಬರ್-ಡಿಸೆಂಬರ್ ಹೊತ್ತಿಗೆ ಮಕ್ಕಳಿಗೆ ಲಸಿಕೆ ಲಭ್ಯವಾಗುವ ಸಾಧ್ಯತೆಯೂ ಇರುವುದರಿಂದ, ಮುಂದಿನ ಶೈಕ್ಷಣಿಕ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಅನುವಾಗಲಿದೆ. ಶಾಲೆಗಳಲ್ಲಿ ಬಿಸಿಯೂಟ ಮತ್ತೆ ಯಾವಾಗ ಆರಂಭವಾಗಲಿದೆ ಎಂಬುದು ಪ್ರಶ್ನೆಯಾಗಿತ್ತು. ಇದಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ದಸರಾ ಬಳಿಕ ಆರಂಭಿಸುವ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ. ಬಿಸಿಯೂಟ ಬದಲಾಗಿ ಮಕ್ಕಳಿಗೆ ಆಹಾರಧಾನ್ಯ ಒದಗಿಸಲಾಗುತ್ತಿತ್ತು. ಆದರೆ, ಹಳ್ಳಿಗಳಲ್ಲಿ ಈಗಾಗಲೇ ಶಾಲೆ ತೊರೆದ ಮಕ್ಕಳ ಸಂಖ್ಯೆ ದೊಡ್ಡಪ್ರಮಾಣದಲ್ಲಿದೆ. ಇವರನ್ನು ಮತ್ತೆ ಶಾಲೆಗೆ ಕರೆತರುವುದು, ಕಲಿಕಾ ಚಟುವಟಿಕೆಯಲ್ಲಿ ತೊಡಗಿಸುವುದು ಬಹುದೊಡ್ಡ ಸವಾಲು. ಈ ನಿಟ್ಟಿನಲ್ಲಿ ಬಿಸಿಯೂಟ ಪುನರಾರಂಭಿಸುವುದು, ಇನ್ನಿತರ ಉತ್ತೇಜನಕಾರಿ ಕ್ರಮಗಳನ್ನು ಕೈಗೊಳ್ಳುವುದು ಈಗಿನ ಅಗತ್ಯವಾಗಿದೆ. ಲಾಕ್​ಡೌನ್ ಬಳಿಕ ಬಹುತೇಕ ಎಲ್ಲ ಕ್ಷೇತ್ರಗಳು ಜೀವ ಪಡೆದುಕೊಂಡಿವೆ. ಶೈಕ್ಷಣಿಕ ವಲಯವೂ ಮೊದಲಿನ ಚೈತನ್ಯ ಪಡೆಯುವಂತಾಗಲಿ. ಕರೊನಾ ಸಂಬಂಧಿತ ನಿಯಮಗಳು, ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತ ಮುಂದಡಿ ಇಡಲು ಇದು ಸಕಾಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net