

ಶಿವಮೊಗ್ಗ: ಅತ್ಯಂತ ಹಿಂದುಳಿದ ಸಮಾಜ ಎಂಬ ಹಣೆಪಟ್ಟಿ ಕಟ್ಟಿಕೊಡಿದ್ದ 24 ಮನೆ ಸಾಧುಶೆಟ್ಟಿ ಸಮಾಜ ಇಂದು ಎಲ್ಲ ರಂಗಗಳಲ್ಲೂ ಅಭಿವೃದ್ಧಿಯಾಗುತ್ತಿರುವುದು ಸಂತಸದ ಸಂಗತಿ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಮಿಷನ್ ಕಾಂಪೌಂಡ್‌ನಲ್ಲಿ ಶಿವಮೊಗ್ಗ ಜಿಲ್ಲಾ 24 ಮನೆ ಸಾಧುಶೆಟ್ಟಿ ಮಹಿಳಾ ಸಂಘದಿಂದ ನಿರ್ಮಿಸಿರುವ ಕಾಮಾಕ್ಷಿ ಸಮುದಾಯ ಭವನವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಈ ಸಮಾಜದ ಜನರು ಕಷ್ಟ ಸಹಿಷ್ಣುಗಳು. ಸಾಧನೆ ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂದು ತೋರಿಸಿದ ಸಮಾಜ. ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಿ ಸಮಾಜದ ಬೆಳವಣಿಗೆಗೆ ಅನೇಕರು ಕೊಡುಗೆ ನೀಡುತ್ತಿರುವುದು ಗಮನಾರ್ಹ ಎಂದು ತಿಳಿಸಿದರು.
ನಗರದ ಗಣಪತಿ ದೇವಸ್ಥಾನ, ದೊಡ್ಡಮ್ಮ ದೇವಸ್ಥಾನ ಸೇರಿ ಅನೇಕ ದೇವಾಲಯಗಳ ಅಭಿವೃದ್ಧಿಗೆ ಈ ಸಮಾಜ ದುಡಿದಿದೆ. ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲೂ ಸಮಾಜದ ಯುವಜನರು ಮುಂದಿದ್ದಾರೆ. ಸಮಾಜದ ಎಲ್ಲರೂ ಕೈಜೋಡಿಸಿದರೆ ಯಾವುದೂ ಅಸಾಧ್ಯವಲ್ಲ. ಇತ್ತೀಚೆಗೆ ಈ ಸಮಾಜದವರು ಐಎಎಸ್, ಕೆಎಎಸ್ ಹುದ್ದೆಗೂ ಆಯ್ಕೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಸೆ. 28ರಿಂದ ಜಾತಿಗಣತಿ ಸಮೀಕ್ಷೆ ನಡೆಯುತ್ತಿದ್ದು, ನಮ್ಮಲ್ಲಿ ಅನೇಕ ಉಪ ಪಂಗಡಗಳಿವೆ. ರಾಜ್ಯದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯನ್ನು ಹಿಂದಿನ ಸಮೀಕ್ಷೆಯಲ್ಲಿ ತೋರಿಸಲಾಗಿತ್ತು. ಈಗ ನಾವೆಲ್ಲರೂ ಒಂದಾಗಿ ಸಾಧುಶೆಟ್ಟಿ ಎಂದೇ ನಮೂದಿಸಬೇಕು ಎಂದು ಕರೆ ನೀಡಿದರು.
24 ಮನೆ ಸಾಧುಶೆಟ್ಟಿ ಮಹಿಳಾ ಸಂಘದ ಅಧ್ಯಕ್ಷೆ ನಾಗರತ್‌ನಾ ಸೋಮಶೇಖರ್, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಡಿ.ಎಸ್.ಅರುಣ್, ಮುಖಂಡರಾದ ವಿ.ರಾಜು, ಎನ್.ರಮೇಶ್, ಶೋಭಾ, ಜಿ.ಅಶ್ವಿನಿ ಇತರರಿದ್ದರು.