

ನಾಂದೇಡ್ (ಮಹಾರಾಷ್ಟ್ರ): ಮಹಾರಾಷ್ಟ್ರದ ಪಾಲ್ಗರ್ನ ಗಡ್ಚಿಂಚಾಲೆ ಎಂಬ ಗ್ರಾಮದಲ್ಲಿ ನಿಗೂಢವಾಗಿ ಹತ್ಯೆಗೊಳಗಾದ ಇಬ್ಬರು ಸಾಧುಗಳ ಘಟನೆಯ ಬಗ್ಗೆ ಇನ್ನೂ ಸತ್ಯಾಂಶ ಹೊರಬರುವ ಮುನ್ನವೇ ನಾಂದೇಡ್ ಜಿಲ್ಲೆಯ ಆಶ್ರಮದಲ್ಲಿ ಇನ್ನೊಂದು ಕೊಲೆಯಾಗಿದೆ.
ಉಮ್ರಿಯಲ್ಲಿರುವ ಆಶ್ರಮದಲ್ಲಿ ಶಿವಾಚಾರ್ಯ ನಿರ್ವಾಣರುದ್ರ ಪುಷ್ಪಪತಿನಾಥ ಮಹಾರಾಜ್ ಕೊಲೆಯಾದವರು. ಇವರು ಕರ್ನಾಟಕದವರು ಎಂದು ವರದಿಯಾಗಿದೆ. ಇವರು ಕೊಲೆಯಾದ ಸಮೀಪದಲ್ಲಿ ಇರುವ ಶೌಚಗೃಹದಲ್ಲಿ ಇನ್ನೊಬ್ಬ ವ್ಯಕ್ತಿ ಕೊಲೆಯೂ ಆಗಿದೆ ಎಂದು ನಾಂದೇಡ್ನ ಎಸ್ಪಿ ವಿಜಯಕುಮಾರ್ ಮಾಗರ್ ತಿಳಿಸಿದ್ದಾರೆ.
‘ಯುವಕನೊಬ್ಬ ಆಶ್ರಮದಲ್ಲಿ ಲೂಟಿ ಮಾಡುವ ವೇಳೆ ಎರಡೂ ಹತ್ಯೆಗಳನ್ನು ನಡೆಸಿದ್ದಾನೆ ಎನ್ನಲಾಗಿದ್ದು, ಈ ಬಗ್ಗೆ ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಿದೆ.
ಪಾಲ್ಗರ್ನಲ್ಲಿ ನಡೆದ ಸಾಧುಗಳ ಹಿಂದಿರುವ ಕೈವಾಡ ಯಾರದ್ದು, ಈ ಹತ್ಯೆ ನಡೆದದ್ದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿರುವ ನಡುವೆಯೇ ಸಾಧುಗಳ ಪರ ವಾದಿಸುತ್ತಿದ್ದ ವಕೀಲ ದಿಗ್ವಿಜಯ್ ತ್ರಿವೇದಿ ಅವರು ಅಪಘಾತದಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು.
ಸಾಧುಗಳು ಈ ಗ್ರಾಮದ ಮಾರ್ಗವಾಗಿ ಹೋಗುತ್ತಿದ್ದ ಸಮಯದಲ್ಲಿ ಇಬ್ಬರನ್ನು ಹಾಗೂ ಅವರ ಕಾರುಚಾಲಕನನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ಎಳೆದಾಡಿ ಹೊಡೆದು ಸಾಯಿಸಿದ್ದರು. ಅವರು ಎಷ್ಟೇ ಬೇಡಿಕೊಂಡರೂ, ಬಿಡದ ಗ್ರಾಮಸ್ಥರು ಬರ್ಬರವಾಗಿ ಹತ್ಯೆ ಮಾಡಿದ್ದರು. ಇದರ ವೀಡಿಯೋ ವೈರಲ್ ಆಗಿ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆಯ ಹಿಂದೆ ಅನೇಕ ಅನುಮಾನಗಳು ಕೂಡ ಹುಟ್ಟಿಕೊಂಡಿದ್ದವು.
ಸಾಧುಗಳು ಮಕ್ಕಳ ಕಳ್ಳರೆಂದು ಭಾವಿಸಿ ಸಾಧುಗಳ ಹತ್ಯೆ ಮಾಡಲಾಗಿದೆ ಎಂಬಂತೆ ಸುದ್ದಿ ಹರಡಿಸಲಾಗಿತ್ತು. ವಕೀಲ ದಿಗ್ವಿಜಯ್ ಅವರ ಸಾವು ಕೂಡ ಆಕಸ್ಮಿಕ ಎಂದು ವರದಿಯಾಗಿದೆ. (ಏಜೆನ್ಸೀಸ್)