

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಸದ್ಯ ಜೈಲುಪಾಲಾಗಿರುವ ಸ್ಯಾಂಡಲ್ವುಡ್ ನಟ ದರ್ಶನ್ ಮತ್ತು ಆತನ ಸಹಚರರು ಕಳೆದ ಒಂದು ತಿಂಗಳಿನಿಂದ ಪರಪ್ಪನ ಜೈಲಿನಲ್ಲಿದ್ದಾರೆ. ನಟನನ್ನು ನೋಡಲು ಚಿತ್ರರಂಗದ ಕಲಾವಿದರು ಸೇರಿದಂತೆ ಅನೇಕರು ಪರಪ್ಪನ ಅಗ್ರಹಾರಕ್ಕೆ ಧಾವಿಸುತ್ತಿದ್ದಾರೆ. ಆದರೆ, ಜೈಲಿನ ನಿಯಮದ ಪ್ರಕಾರ, ವಾರದಲ್ಲಿ ಎರಡು ಬಾರಿ ಮಾತ್ರ ದರ್ಶನ್ರನ್ನು ನೋಡಲು ಸಾಧ್ಯ. ಹೀಗಾಗಿ ದರ್ಶನ್ರ ಕುಟುಂಬಸ್ಥರಿಗೆ ಮೊದಲ ಆದ್ಯತೆ ಇದ್ದು, ಉಳಿದವರು ತಮಗೆ ಸಿಕ್ಕ ಸಮಯದಲ್ಲಿ ಬರಬಹುದು ಇಲ್ಲವಾದಲ್ಲಿ ಅವರ ಕುಟುಂಬಸ್ಥರೊಡನೆ ಬರಬಹದು. ಇದೀಗ ಇದೇ ರೀತಿ ಹಾಸ್ಯ ಕಲಾವಿದ ಸಾಧು ಕೋಕಿಲ ಅವರಿಗೂ ಎದುರಾಗಿದೆ.
ಇಂದು ಬೆಳಗ್ಗೆಯೇ ಆರೋಪಿ ದರ್ಶನ್ರನ್ನು ಭೇಟಿಯಾಗಲು ಬಂದ ಸಾಧು ಕೋಕಿಲ ಅವರ ಪ್ರವೇಶಕ್ಕೆ ನಿರಾಕರಣೆ ಕೇಳಿಬಂದಿದೆ. ವಾರಕ್ಕೆ ಕೇವಲ ಎರಡು ಭೇಟಿ ಹಿನ್ನೆಲೆ ಗುರುವಾರ ತಮ್ಮ ಕುಟುಂಬದವರ ಜತೆ ಭೇಟಿಗೆ ಬರುವಂತೆ ದರ್ಶನ್ ಸಾಧು ಅವರಲ್ಲಿ ಮನವಿ ಮಾಡಿದ್ದಾರೆ. ದರ್ಶನ್ ಮನವಿಯ ಮೇರೆಗೆ ಸಾಧು ಕೋಕಿಲ ಅಲ್ಲಿಂದ ವಾಪಾಸ್ ಆಗಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ನಟ, ನಾನು ಇಂದು ಭೇಟಿ ಮಾಡಿದರೆ ದರ್ಶನ್ ಅವರ ಕುಟುಂಬದವರಿಗೆ ಅವಕಾಶ ಇರುವುದಿಲ್ಲ. ಹೀಗಾಗಿ ನಾನು ಗುರುವಾರ ಕುಟುಂಬದವರ ಜೊತೆ ಭೇಟಿ ಮಾಡ್ತೇನೆ. ಮೀಡಿಯಾದವರು ವಿಡಿಯೋ ಮಾಡಿದ್ದರಿಂದ ನನ್ನನ್ನು ಹೊರಗೆ ಕಳುಹಿಸಿಬಿಟ್ಟರು ಎಂದು ನಗು ನಗುತ್ತಲೇ ಹೇಳಿದರು.