

ಚಿಕ್ಕಬಳ್ಳಾಪುರ: ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ ಸಿಗುವ ವಿಚಾರದಲ್ಲಿ ಸ್ಪಷ್ಟ ನೀತಿ ರೂಪುಗೊಳ್ಳಬೇಕಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅಭಿಪ್ರಾಯಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಲ್ಲಿನ ಸತ್ಯ ಸಾಯಿ ಪ್ರೇಮಾಮೃತಮ್ ಸಭಾಂಗಣದಲ್ಲಿ ಕೈಗೊಂಡಿದ್ದ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವದ 61ನೇ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದಲ್ಲಿ ದಾನ, ದತ್ತಿ, ದೇಣಿಗೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸೂಕ್ತ ನೀತಿ ರೂಪಿಸಬೇಕಾದ ಅಗತ್ಯವಿದೆ. ಅಮೆರಿಕದಲ್ಲಿ ಪ್ರತಿಷ್ಠಾನಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ಆಸ್ಟ್ರೇಲಿಯಾದಂಥ ದೇಶಗಳಲ್ಲಿ ದತ್ತಿ ಸಂಸ್ಥೆಗಳು ಹೂಡಿಕೆಗೂ ಅವಕಾಶವಿದೆ ಎಂದರು.
ಈಗ ಹೆಚ್ಚಿನ ಹಣವನ್ನು ಕಾಯ್ದಿರಿಸಿಕೊಳ್ಳುವಂತೆಯೂ ಇಲ್ಲ. ಷೇರುಪೇಟೆ ಇಲ್ಲವೇ ಬಾಂಡ್, ಆಸ್ತಿಗಳಲ್ಲಿ ಹಣ ತೊಡಗಿಸುವಂತಿಲ್ಲ. ಯಾರಾದರೂ ಇಂತಹ ಹೂಡಿಕೆಗಳನ್ನು ದಾನ ನೀಡಿದಾಗ, ಅದನ್ನು ಒಂದು ವರ್ಷದೊಳಗೆ ಮಾರಬೇಕು. ಇಲ್ಲದಿದ್ದರೆ ತೆರಿಗೆ ಬೀಳುತ್ತದೆ. ಎಫ್‌ಡಿಯಲ್ಲಿ ಹಣ ತೊಡಗಿಸಲು ಅವಕಾಶವಿದ್ದು ದೊಡ್ಡ ಮೊತ್ತಕ್ಕೆ ಶೇ. 3 ರಿಂದ 4 ಬಡ್ಡಿ ಸಿಗುತ್ತದೆ. ಆದರೆ, ಆರೋಗ್ಯ ಸೇವೆಗಳ ವೆಚ್ಚವು ವರ್ಷಕ್ಕೆ ಶೇ.20 ರಷ್ಟು ಹೆಚ್ಚಾಗುತ್ತಿದೆ. ಸತ್ಯಸಾಯಿ ಸಂಸ್ಥೆಯು ಇಲ್ಲಿಯವರೆಗೂ 250 ಕೋಟಿ ರೂಗೂ ಹೆಚ್ಚು ಹಣ ಜಿಎಸ್‌ಟಿ ಕಟ್ಟಿದ್ದು ಇವೆಲ್ಲವೂ ಹೆಚ್ಚಿನ ಹೊರೆಯಾಗಿದೆ ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಐಸಿಯುನಲ್ಲಿ ಚಿಕಿತ್ಸೆಗೆ ಆಕ್ಸಿಜನ್ ಬಿಲ್ ದಿನಕ್ಕೆ 3 ಸಾವಿರ ರೂ ಆಗುತ್ತದೆ. ಎಲ್ಲವೂ ದುಬಾರಿ. ಆದರೆ, ಸತ್ಯ ಸಾಯಿ ಆಸ್ಪತ್ರೆಯಲ್ಲಿ ಎಲ್ಲವೂ ಸಂಪೂರ್ಣ ಉಚಿತವಾಗಿವೆ. ಇದು ಸರ್ವಶಕ್ತ ದೇವರಿಗೆ ಅತಿ ಹೆಚ್ಚು ತೆರಿಗೆ ಪಾವತಿ ಎಂದರು.
ವೆನೆಜುವೆಲಾದ ಪ್ರತಿನಿಧಿಗಳಾದ ಬೆಲ್ಕಿಸ್ ಕ್ವಾರ್ಟಿನ್, ಗಾರ್ಡಿಮರ್ ಹೆರ್ನಾಂಡೆಜ್ ಮತ್ತಿತರರು ಇದ್ದರು.