

ಬೆಂಗಳೂರು: ನವದೆಹಲಿಯಲ್ಲಿ ಕಳೆದ ಮಾ.17ರಂದು ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸದ್ಗುರು ಅವರು ಚೇತರಿಸಿಕೊಂಡಿದ್ದು, ಸೋಮವಾರ ಕೊಯಮತ್ತೂರಿನಲ್ಲಿರುವ ಈಶ ಯೋಗ ಕೇಂದ್ರಕ್ಕೆ ಮರಳಿದ್ದಾರೆ.
ಕೊಯಮತ್ತೂರಿನ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು ಸಂತಸದಿಂದ ಸ್ವಾಗತಿಸಿದರು. ಅಲ್ಲದೆ, ವಿಮಾನ ನಿಲ್ದಾಣದಿಂದ ಯೋಗ ಕೇಂದ್ರಕ್ಕೆ ತೆರಳುವ ದಾರಿಯದ್ದಕ್ಕೂ ನೆರೆದಿದ್ದ ಜನರು, ಸದ್ಗುರುಗಳ ಮರಳುವಿಕೆಯನ್ನು ಸಂಭ್ರಮಿಸಿದರು. ಈಶ ಯೋಗ ಕೇಂದ್ರದಲ್ಲಿ ಒಟ್ಟುಗೂಡಿದ್ದ ಆದಿವಾಸಿ ಜನರು, ಗ್ರಾಮಸ್ಥರು ಸಾಂಪ್ರದಾಯಿಕ ಸಂಗೀತ ಹಾಗೂ ಜಾನಪದ ಹಾಡುಗಳೊಂದಿಗೆ ಸದ್ಗುರುಗಳನ್ನು ಸ್ವಾಗತಿಸಿದರು.
ಸ್ಥಳೀಯ ದಾಣಿಕಂಡಿ ಗ್ರಾಮದ ಬುಡಕಟ್ಟು ಮಹಿಳೆ ವಿಜಯಾ ಮಾತನಾಡಿ, 'ಸದ್ಗುರುಗಳು ನೀಡಿರುವ ಯೋಗ ಸಾಧನಗಳ ಮೂಲಕ ನಮಗೆ ಸಂತೋಷ ಮತ್ತು ಆರೋಗ್ಯ ಕರುಣಿಸಿದ್ದಾರೆ. ಇ ಮೂಲಕ ನಮ್ಮ ಗ್ರಾಮವನ್ನೇ ಪರಿವರ್ತಿಸಿದ್ದಾರೆ. ಅವರ ಸಂದೇಶದ ವೀಡಿಯೋ ತುಣುಕು ನೋಡುತ್ತಾ, ಹಳ್ಳಿಯ ಯುವಕರು ದುಷ್ಚಟ ಮತ್ತು ಆಲಸ್ಯದಿಂದ ಹೊರಬಂದಿದ್ದಾರೆ. ಅವರಿಗೆ ಶಸ್ತ್ರಚಿಕಿತ್ಸೆ ನಡೆದ ಸುದ್ದಿ ತಿಳಿದಾಗ ಗ್ರಾಮವೇ ಆತಂಕಗೊಂಡಿತ್ತು. ಇದೀಗ ಅವರು ಸುರಕ್ಷಿತವಾಗಿ ಬಂದಿರುವುದು ಸಮಾಧಾನ ತಂದಿದೆ ಎಂದು ಹೇಳಿದರು.