ಸದಾಶಿವ ಆಯೋಗದ ವರದಿ ವಿರೋಧಿಸಿ ಪ್ರತಿಭಟನೆ

IMG_2186
Published on

ಶಿವಮೊಗ್ಗ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಡೆಯುತ್ತಿರುವ ಷಡ್ಯಂತ್ರ ವಿರೋಧಿಸಿ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಶುಕ್ರವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಭೋವಿ, ಬಂಜಾರ, ಛಲವಾದಿ, ಕೊರಚ, ಕೊರಮ, ಅಲೆಮಾರಿ, ಅರೆ ಅಲೆಮಾರಿ, ಸುಡುಗಾಡು ಸಿದ್ಧ ಇನ್ನಿತರ ಸಮುದಾಯಗಳಿಗೆ ಸದಾಶಿವ ಆಯೋಗದ ವರದಿ ಕಂಟಕವಾಗಿದೆ. ಹಾಗಾಗಿ ಆ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದು. ಸಾರ್ವಜನಿಕ ಚರ್ಚೆಗೆ ಬಿಡುಗಡೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ವರದಿ ಈಗಾಗಲೇ ಸೋರಿಕೆಯಾಗಿದ್ದು ಪಾವಿತ್ರತೆಯನ್ನು ಉಳಿಸಿಕೊಂಡಿಲ್ಲ. ಆಯೋಗ ತನ್ನ ಉದ್ದೇಶಕ್ಕೆ ವಿರುದ್ಧವಾಗಿ ಶಿಫಾರಸ್ಸುಗಳನ್ನು ಮಾಡಿದೆ. ಅಸಂವಿಧಾನಿಕ ಅಂಶ ಮತ್ತು ಅವಾಸ್ತವಿಕ ಅಂಕಿ ಅಂಶಗಳು ವರದಿಯಲ್ಲಿದ್ದು ಈಗ ಅಪ್ರಸ್ತುತವಾಗಿದೆ. ಆ ನಿಟ್ಟಿನಲ್ಲಿ ಇದು ಸ್ವೀಕಾರಕ್ಕೆ ಯೋಗ್ಯವಾಗಿಲ್ಲ. ಈ ನಡುವೆ ಪರಿಶಿಷ್ಟ ಜಾತಿಗಳ ಸಹೋದರ ಸಮುದಾಯಗಳ ಮಧ್ಯೆ ದ್ವೇಷ ಭಾವನೆ ಬಿತ್ತಲು ಮುಂದಾಗಿರುವ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಮತ್ತು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.

ಹೋರಾಟಗಳ ಹೆಸರಲ್ಲಿ ಬಂಜಾರರ ಕುಲಗುರು ಶ್ರೀ ಸಂತ ಸೇವಾಲಾಲ್ ಮತ್ತು ಸಚಿವ ಪ್ರಭು ಚೌಹಾಣ್ ಅವರನ್ನು ಅವಹೇಳನ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಚಿತ್ರದುರ್ಗದ ಸರ್ದಾರ್ ಸೇವಾಲಾಲ್ ಮಹಾರಾಜ್, ಒಕ್ಕೂಟದ ಅಧ್ಯಕ್ಷ ಎಂ.ವೈ. ನಾನ್ಯಾನಾಯ್ಕ, ಕಾರ್ಯಾಧ್ಯಕ್ಷ ಎಸ್.ರವಿಕುಮಾರ್, ಪ್ರಮುಖರಾದ ಬಿ. ಜಗದೀಶ್, ಧಿರರಾಜ್ ಹೊನ್ನವಿಲೆ, ವೀರಭದ್ರಪ್ಪ ಪೂಜಾರ್, ಗಿರೀಶ್, ಈರಾನಾಯ್ಕ, ಚಂದ್ರಕುಮಾರ್, ಜನ್ನಾಪುರ ಮಂಜುನಾಥ್, ರೇಖ್ಯಾನಾಯ್ಕಾ, ವೀರೇಶ್ ಕ್ಯಾತಿನಕೊಪ್ಪ, ಕುಮಾರ ನಾಯ್ಕ, ಆಯನೂರು ಶಿವಾನಾಯ್ಕ, ನವೀನ್‌ಕುಮಾರ್, ಬೋಜ್ಯಾ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net