ಗ್ಯಾರಂಟಿಗಳನ್ನು ಘೋಷಣೆ ಮಾಡುವಾಗ ಕಾಂಗ್ರೆಸ್​ ನಾಯಕರಿಗೆ ಪರಿಜ್ಞಾನ ಇರಲಿಲ್ಲವೇ: ಸದಾನಂದ ಗೌಡ

DVS
Published on

ಚಾಮರಾಜನಗರ: ಬಡವರಿಗೆ ಅಕ್ಕಿ ಕೊಡಬಾರದು ಎಂದು ಹೇಳುವ ನೀಚ ಬುದ್ದಿ ಬಿಜೆಪಿ ನಾಯಕರಿಗಿಲ್ಲ. ಕಾಂಗ್ರೆಸ್​ನವರಂತೆ ನೀಚ ರಾಜಕಾರಣ ಮಾಡಿ ಜನರ ಹೊಟ್ಟೆ ಹೊಡೆಯುವುದಿಲ್ಲ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ. ಸದಾನಂದ ಗೌಡ ಹೇಳಿದ್ಧಾರೆ.

ದೇಶದಲ್ಲಿ ಆಹಾರ ಭದ್ರತೆಗಾಗಿ ರಾಜ್ಯಗಳಿಗೆ ಅಕ್ಕಿ ಮಾರಾಟ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರುವ ಮುನ್ನವೇ ಈ ನಿರ್ಧಾರ ಮಾಡಲಾಗಿತ್ತು ಎಂದು ತಿಳಿಸಿದ್ಧಾರೆ.

ಪರಿಜ್ಞಾನ ಇರಲಿಲ್ಲವೇ

13 ಬಜೆಟ್​ ಮಂಡಿಸಿದ ಕೂಡಲೇ ಗದ್ದೆಯಲ್ಲಿ ಭತ್ತ ಬೆಳೆದು ಅಕ್ಕಿ ಕೊಡುವುದಿಕ್ಕೆ ಆಗುವುದಿಲ್ಲ. ಕುಣಿಯಲಾರದವರು ನೆಲ ಡೊಂಕು ಎಂದಂತೆ ಕಾಂಗ್ರೆಸ್​ನವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗದೆ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ಧಾರೆ. ಅಕ್ಕಿ ಕೊಡುತ್ತೇವೆ ಎಂದು ಘೋಷಣೆ ಮಾಡುವಾಗ ಇವರಿಗೆ ಪರಿಜ್ಞಾನ ಇರಲಿಲ್ಲವೇ ಎಂದು ಪ್ರಶ್ನಿಸಿದ್ಧಾರೆ.

ನನಗೂ ಫ್ರೀ, ನಿಮಗೂ ಫ್ರೀ ಎಂದು ಹೇಳಿದ ಸಿದ್ದರಾಮಯ್ಯನವರ ಹೆಗಲ ಮೇಲಿದ್ದ ಟವಲ್​ ಎಲ್ಲಿಗೆ ಹೋಯಿತು. ಏನಾದರೂ ಆಗಲಿ ಜನತೆಗೆ ಅಕ್ಕಿ ಕೊಡುತ್ತೇವೆ ಎಂದು ಹೇಳಿರುವ ಕಾಂಗ್ರೆಸ್​ ನಾಯಕರಿಗೆ ಮುಂದಾಲೋಚನೆ ಇರಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

DVS

ಸಮರ್ಥ ನಾಯಕನ ಆಯ್ಕೆ

ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ಕುರಿತಾಗಿ ಪ್ರತಿಕ್ರಿಯಿಸಿ ಅಧಿವೇಶನ ಆರಂಭವಾಗುವ ಮುನ್ನವೇ ಮಾಡಬೇಕಾಗಿತ್ತು. ಆದರೆ, ಚುನಾವಣೆ ಸೋಲಿನ ಕಾರಣ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಾಗಿರುವುದರಿಂದ ಸ್ವಲ್ಪ ತಡವಾಗಿದೆ. ಜುಲೈ 3ರಂದು ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ಧಾರೆ.

ನಮ್ಮ ರಾಷ್ಟ್ರೀಯ ನಾಯಕರು ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್​ ಜುಗಲ್​ಬಂದಿಗೆ ಸವಾಲ್​​ ಎಸೆಯುವ ಸಮರ್ಥ ನಾಯಕನನ್ನು ಆಯ್ಕೆ ಮಾಡುತ್ತಾರೆ. ನಮ್ಮ ಪಕ್ಷದಲ್ಲಿ ಇದಕ್ಕೆ ಆದ ಒಂದು ಪ್ರಕ್ರಿಯೆ ಇದೆ.

ಹೊಂದಾಣಿಕೆ ರಾಜಕಾರಣದ ಕುರಿತಾಗಿ ಪ್ರತಿಕ್ರಿಯಿಸಿ ನಮ್ಮ ಪಕ್ಷ ಯಾವತ್ತಿಗೂ ಹೊಂದಾಣಿಕೆ ರಾಜಕೀಯ ಮಾಡಿಲ್ಲ. ಒಂದು ವೇಳೆ ನಾವು ಹಾಗೆ ಮಾಡಿದ್ದರೆ ಸ್ಪಷ್ಟ ಬಹುಮತ ಪಡೆಯುತ್ತಿದ್ದೆವು. ಹೊಂದಾಣಿಕೆ ಮಾಡಿಕೊಳ್ಳದ ಕಾರಣ ಹಿನ್ನಡೆಯಾಗಿದೆ. ಸಮಯ, ಸಂದರ್ಭ ನೋಡಿ ರಾಜಕಾರಣದಲ್ಲಿ ತಂತ್ರಗಾರಿಕೆ ಹೆಣೆಯಬೇಕು. ರಾಜಕಾರಣದಲ್ಲಿ ಹೊಂದಾಣಿಕೆ ಇರಬಾರದು ಎಂದಲ್ಲ ಅವಶ್ಯಕತೆ ಇದ್ದಾಗ ಮಾಡಿಕೊಳ್ಳಬೇಕು ಎಂದು ಸಂಸದ ಡಿ.ವಿ. ಸದಾನಂದ ಗೌಡ ಹೇಳಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net