

ಬೆಂಗಳೂರು: ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿನ ಕುರಿತು ವರದಿಯು ಪಕ್ಷದ ರಾಜ್ಯಾಧ್ಯಕ್ಷರಿಗೆ ಸಲ್ಲಿಕೆಯಾಗಿದೆ. ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಅಧ್ಯಕ್ಷತೆಯಲ್ಲಿ ರಚಿತ ಸಮಿತಿಯು ಎರಡೂ ಕ್ಷೇತ್ರಗಳಿಗೆ ಭೇಟಿ ನೀಡಿ, ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿದೆ.
ಚುನಾವಣೆ ಮತ್ತು ಪ್ರಚಾರ ತಂತ್ರಗಾರಿಕೆ, ಬೂತ್‌ವಾರು ಪಕ್ಷದ ಅಭ್ಯರ್ಥಿಗಳ ಪಡೆದ ಮತಗಳ ಎಣಿಕೆ ಇತ್ಯಾದಿ ಅಂಶಗಳ ಆಧಾರದಲ್ಲಿ ಸೋಲಿನ ಕಾರ್ಯ-ಕಾರಣಗಳನ್ನು ಈ ವರದಿಯಲ್ಲಿ ವಿಶ್ಲೇಷಿಸಲಾಗಿದೆ.
ಎರಡೂ ಕ್ಷೇತ್ರಗಳಲ್ಲಿ ಸೋಲಿಗೆ ನಿರ್ದಿಷ್ಟವಾಗಿ ಇಂತಹವರೇ ಹೊಣೆ ಎಂದು ಬೊಟ್ಟು ಮಾಡಿ, ಕ್ರಮ ಕೈಗೊಳ್ಳುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿಲ್ಲ. ಆದರೆ ಮುಂದಿನ ಸಂಘಟನಾತ್ಮಕ ತಂತ್ರ ಹಾಗೂ ಚುನಾವಣಾ ಕಾರ್ಯತಂತ್ರದ ಈ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಇತ್ಯಾದಿ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ದೆಹಲಿಯಲ್ಲಿರುವ ಡಿ.ವಿ.ಸದಾನಂದಗೌಡ ಅವರು ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿದ್ದಾರೆ. ಇದೇ ವೇಳೆ ಉಪ ಚುನಾವಣೆ ಸೋಲಿನ ವರದಿಯಲ್ಲಿರುವ ಪ್ರಮುಖಾಂಶಗಳ ಕಡೆಗೆ ವರಿಷ್ಠರ ಗಮನಸೆಳೆದಿದ್ದಾರೆ ಎಂದು ತಿಳಿದಿದೆ.
ಸದಾನಂದಗೌಡರು ದೆಹಲಿಗೆ ಪ್ರಯಾಣ ಬೆಳೆಸಿದ್ದು, ವರಿಷ್ಠರ ಕರೆಯೋ ಅಥವಾ ವೈಯಕ್ತಿಕ ಕೆಲಸದ ನಿಮಿತ್ತವೋ ಗೊತ್ತಾಗಿಲ್ಲ. ಆದರೆ ಕಳೆದ ಬಾರಿ ದೆಹಲಿಗೆ ಹೋದಾಗ ರಾಷ್ಟ್ರೀಯ ನಾಯಕರು ಭೇಟಿಗೆ ಕಾಲಾವಕಾಶ ನೀಡಿರಲಿಲ್ಲ. ಹೀಗಾಗಿ ಈ ಬಾರಿ ದೆಹಲಿ ಪ್ರವಾಸದಲ್ಲಿ ಗೌಪ್ಯತೆ ಕಾಪಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.