ಸಚಿನ್​ ಪೈಲಟ್​ ಪರಿಸ್ಥಿತಿ ನೋಡಿದರೆ ತುಂಬ ನೋವಾಗುತ್ತದೆ ಎಂದ ಜ್ಯೋತಿರಾದಿತ್ಯ ಸಿಂಧಿಯಾ

Sndhiaya
Published on

ನವದೆಹಲಿ: ರಾಜಸ್ಥಾನ ಸರ್ಕಾರದ ಹಳಿ ತಪ್ಪಿದೆ. ಆ ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಾಗಲೇ ಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ಅಶೋಕ್ ಗೆಹ್ಲೋಟ್​ ಮತ್ತು ಸಚಿನ್​ ಪೈಲಟ್​ ನಡುವೆ ಭಿನ್ನಾಭಿಪ್ರಾಯ ಇತ್ತು.

ಅಂತೂ ಇಲ್ಲಿಯವರೆಗೆ ಬೂದಿ ಮುಚ್ಚಿದ ಕೆಂಡದಂತಿದ್ದ ಅಸಮಾಧಾನ ಈಗ ಭರ್ಜರಿ ಹೊಗೆಯಾಡುತ್ತಿದೆ. ಉಪಮುಖ್ಯಮಂತ್ರಿ ಸಚಿನ್​ ಪೈಲಟ್​ ದೆಹಲಿಗೆ ಹೋಗಿ ಬೀಡುಬಿಟ್ಟಿದ್ದಾರೆ. ಗೆಹ್ಲೋಟ್​ ವಿರುದ್ಧ ತಿರುಗಿಬಿದ್ದು, ಮುಖ್ಯಮಂತ್ರಿ ಪಟ್ಟಕ್ಕಾಗಿ ಕಾಂಗ್ರೆಸ್​ ಹೈಕಮಾಂಡ್ ಎದುರು ಬಲಪ್ರದರ್ಶನಕ್ಕೆ ಮುಂದಾಗಿದ್ದಾರೆ. ಸುಮಾರು 25 ಶಾಸಕರು ತಮ್ಮೊಂದಿಗೆ ಇರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಅವರಿಗಿನ್ನೂ ಕಾಂಗ್ರೆಸ್​ ವರಿಷ್ಠರನ್ನು ಭೇಟಿಯಾಗಲು ಅವಕಾಶ ಸಿಕ್ಕಿಲ್ಲ.

ಇದೀಗ ಮಾಜಿ ಕಾಂಗ್ರೆಸ್​ ಮುಖಂಡ, ಈಗಿನ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಚಿನ್​ ಪೈಲಟ್​ ಬಗ್ಗೆ ಮರುಕ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಗೆಹ್ಲೋಟ್​ ಸರ್ಕಾರ ಉರುಳಿಸಲು ಮಾರ್ಚ್​ ಲಾಕ್​ಡೌನ್​ ಮುಂಚಿನಿಂದಲೂ ಪ್ರಯತ್ನ

ಕಾಂಗ್ರೆಸ್​ನೊಂದಿಗಿನ 18 ವರ್ಷಗಳ ನಂಟು ಕಡಿದುಕೊಂಡು ಮಾರ್ಚ್​ನಲ್ಲಿ ಬಿಜೆಪಿ ಸೇರಿದ್ದ ಜ್ಯೋತಿರಾದಿತ್ಯ ಸಿಂದಿಯಾ ಅವರು ಇಂದು ಟ್ವೀಟ್​ ಮಾಡಿದ್ದು, ನನ್ನ ಹಿಂದಿನ ಸಹೋದ್ಯೋಗಿ ಸಚಿನ್​ ಪೈಲಟ್​ ಅವರನ್ನು ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ಅವರು ಸೈಡ್​ಲೈನ್​ ಮಾಡುತ್ತಿರುವುದನ್ನು, ಅವರಿಗೆ ಕಿರುಕುಳ ನೀಡುತ್ತಿರುವುದನ್ನು ನೋಡಿದರೆ ನಿಜಕ್ಕೂ ನೋವಾಗುತ್ತದೆ. ಕಾಂಗ್ರೆಸ್​​ನಲ್ಲಿ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಗೆಲ್ಲ ಬೆಲೆಯಿಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದು ಹೇಳಿದ್ದಾರೆ.

ಮಧ್ಯಪ್ರದೇಶ ಕಾಂಗ್ರೆಸ್​​ನಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿಗೆ ಸೇರ್ಪಡೆಯಾಗಿ ನಾಲ್ಕು ತಿಂಗಳು ಕಳೆದಿವೆ. ಕಾಂಗ್ರೆಸ್​​ನಲ್ಲಿ ಯುವ ಮುಖಂಡರಿಗೆ ಗೌರವ, ಬೆಲೆ, ಸ್ಥಾನ ಯಾವುದೂ ಸಿಗುವುದಿಲ್ಲ ಎಂದು ಸಿಂಧಿಯಾ ಈ ಹಿಂದೆಯೇ ಹೇಳಿದ್ದರು. ಇದೀಗ ಸಚಿನ್​ ಪೈಲಟ್​ ಕೂಡ ಕಾಂಗ್ರೆಸ್​ನಿಂದ ಹೊರಬೀಳಲಿದ್ದಾರಾ ಎಂಬ ಅನುಮಾನವೂ ಕಾಡುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net