ಸಚಿವ ಸಂಪುಟದಿಂದ ಸುಧಾಕರ್ ವಜಾ ಆಗುವ ತನಕ ಬಿಜೆಪಿ ವಿರಮಿಸುವುದಿಲ್ಲ; ಗೋವಿಂದ ಕಾರಜೋಳ ಎಚ್ಚರಿಕೆ

govind karjol
Published on

ಬೆಂಗಳೂರು: ದಲಿತ ಮಹಿಳೆ ಜಮೀನು ಕಬಳಿಸುವ ಜತೆಗೆ ದಲಿತರ ಮೇಲೆ ದೌರ್ಜನ್ಯ ಎಸಗಿರುವ ಸಚಿವ ಡಿ.ಸುಧಾಕರ್ ಅವರು ರಾಜೀನಾಮೆ ನೀಡಬೇಕು ಇಲ್ಲವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ದಲಿತರಿಗೆ ನ್ಯಾಯ ಹಾಗೂ ರಕ್ಷಣೆ ಸಿಗುವ ತನಕ ಬಿಜೆಪಿ ವಿರಮಿಸುವುದಿಲ್ಲ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ, ರಾಜ್ಯ ಎಸ್ ಸಿ ಮೋರ್ಚಾ ಅಧ್ಯಕ್ಷ, ಎಂಎಲ್ ಸಿ ಛಲವಾದಿ ನಾರಾಯಣಸ್ವಾಮಿ ಎಚ್ಚರಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಗೋವಿಂದ ಕಾರಜೋಳ ಮಾತನಾಡಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೀನ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ.‌ ಸ್ವತಃ ಮಂತ್ರಿಗಳೇ ದಲಿತರ ಆಸ್ತಿ ಕಬಳಿಸುತ್ತಿದ್ದಾರೆ. ದಲಿತರ ಆಸ್ತಿ ಪಾಸ್ತಿ ನುಂಗಿ ಹಾಕಲು ಮೋಸದ ಪ್ರಕರಣಗಳು ಹೊರಬರುತ್ತಿವೆ.

ಆಸ್ತಿ ಕಬಳಿಕೆ ಪ್ರಕರಣ ದಾಖಲಾಗಿ, ಎಫ್ಐಆರ್ ಆದ ಮೇಲೆ ರಾಜೀನಾಮೆ‌ ಕೊಟ್ಟು ಗೌರವಯತವಾಗಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಬಿಡಬೇಕಿತ್ತು.‌ ಸಿಎಂ ಆದರೂ ಸಂಪುಟದಿಂದ ಕೈಬಿಡಬೇಕಿತ್ತು. ಎಫ್ಐಆರ್ ಆದ ಮೇಲೆ ವರದಿ ತರಿಸಿಕೊಂಡು ಹೇಳುತ್ತೇನೆ ಎಂದು ಗೃಹ ಸಚಿವ ಪರಮೇಶ್ವರ್  ಹೇಳಿರುವುದು ಉಡಾಫೆ ಮಾತು ಎಂದು ಕಿಡಿಕಾರಿದರು.

ಬೆಲೆಬಾಳುವ ಜಮೀನು. ಹೇಗಾದರೂ ಮಾಡಿ ಕಬಳಿಸಬೇಕೆಂದು ಸುಳ್ಳು ದಾಖಲೆ ಸೃಷ್ಟಿಸಿದ ಆರೋಪ ಇದೆ. ಸುಲಭವಾಗಿ ಇದನ್ನು ಇಲ್ಲಿಗೇ ಬಿಡಲ್ಲ. ದಲಿತರ ಪರ ನಿಲ್ಲುತ್ತೇವೆ. ಒಂದಿಂಚು ಜಮೀನು ಹೋಗಲು ಬಿಡಲ್ಲ. ಕೂಡಲೇ ರಾಜೀನಾಮೆ ಪಡೆಯಿರಿ ಅಥವಾ ವಜಾ ಮಾಡಿ ಎಂದು ಕಾರಜೋಳ ಆಗ್ರಹಿಸಿದರು.

ದಲಿತ ವೃದ್ಧೆಗೆ ವಂಚಿಸಿದ ಜಮೀನು ಕಬಳಿಸಿದ ಸುಧಾಕರ್ ರಕ್ಷಣೆಗೆ ನಿಂತಿರುವ ಕಾಂಗ್ರೆಸ್ ಸರ್ಕಾರ ಮೋಸದ ಸರ್ಕಾರವಾಗಿದೆ. ತನಿಖೆ ನಡೆಯುವ ಮುನ್ನವೇ ಸುಳ್ಳು ಕೇಸ್ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತೀರ್ಪು ಕೊಟ್ಟಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net