ವಜಾಗೊಂಡಿರೋ ಪೊಲೀಸ್ ಅಧಿಕಾರಿಯೇ ಸಂಚುಕೋರ: ಭಯ ಹುಟ್ಟಿಸಿ ಅಂಬಾನಿಯಿಂದ ಹಣ ವಸೂಲಿಗೆ ಸ್ಕೆಚ್

Vaje
Published on

ನವದೆಹಲಿ: ಉದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸ ಆಂಟಿಲಾ ಬಳಿ ಸ್ಪೋಟಕ ಇರುವ ಕಾರು ಪತ್ತೆಯಾದ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಇದೇ ಪ್ರಕರಣದಲ್ಲಿ ವಜಾಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಈ ಪ್ರಕರಣದ ಪ್ರಮುಖ ಸಂಚುಕೋರ ಎಂದು ರಾಷ್ಟ್ರೀಯ ತನಿಖಾ ದಳ (ಎನ್​ಐಎ)ಆರೋಪಪಟ್ಟಿಯಲ್ಲಿ ಉಲ್ಲೇಖ ಮಾಡಿದೆ. ತನ್ನನ್ನು ಸೂಪರ್ ಕಾಪ್ ಎಂದು ಬಿಂಬಿಸಿಕೊಳ್ಳುವುದು, ಭಯ ಹುಟ್ಟಿಸುವುದು ಹಾಗೂ ಹಣ ವಸೂಲಿ ಮಾಡುವುದು ಈ ಕೃತ್ಯದ ಹಿಂದಿನ ಉದ್ದೇಶವಾಗಿತ್ತು ಎಂದು ಎನ್​ಐಎ ಉಲ್ಲೇಖ ಮಾಡಿದೆ.

ಸ್ಪೋಟಕ ಹೊಂದಿರುವ ಸ್ಕಾರ್ಪಿಯೊ ಕಾರನ್ನು ಮುಕೇಶ್ ನಿವಾಸದ ಬಳಿ ಪಾರ್ಕ್ ಮಾಡಲಾಗಿತ್ತು. ಇದಕ್ಕೆ ಮುಂಬೈ ಪೊಲೀಸ್ ಇಲಾಖೆಯ ಇನೊವಾ ವಾಹನ ಕೂಡ ಬಳಕೆ ಮಾಡಿಕೊಳ್ಳಲಾಗಿತ್ತು. ಇದರ ಸಂಪೂರ್ಣ ಯೋಜನೆಯನ್ನು ವಾಜೆ ರೂಪಿಸಿದ್ದರು. ಸ್ಪೋಟಕ ಜತೆಗೆ ಬೆದರಿಕೆ ಪತ್ರವನ್ನೂ ಇಡಲಾಗಿತ್ತು. ಸ್ಕಾರ್ಪಿಯೊ ವಾಹನಕ್ಕೆ ನಕಲಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಅವರೇ ತನಿಖಾಧಿಕಾರಿಯಾಗಿದ್ದ ಕಾರಣ, ಪ್ರಾಥಮಿಕ ವರದಿಯನ್ನು ತಿರುಚಿ ತನಿಖೆಯ ದಾರಿ ತಪ್ಪಿಸಿದ್ದರು. ಹಲವು ಸಾಕ್ಷಗಳನ್ನು ನಾಶಪಡಿಸಿ, ನದಿಗೆ ಎಸೆದಿದ್ದರು.

ಉದ್ದೇಶ ಏನು?: ಶ್ರೀಮಂತ ವ್ಯಕ್ತಿಗಳಲ್ಲಿ ಜೀವ ಭಯ ಹುಟ್ಟಿಸುವುದು, ಬಳಿಕ ಅವರಿಗೆ ರಕ್ಷಣೆ ಕೊಡುವ ನೆಪದಲ್ಲಿ ದೊಡ್ಡ ಮೊತ್ತದ ಹಣ ವಸೂಲಿ ಮಾಡುವುದು ವಾಜೆ ಉದ್ದೇಶವಾಗಿತ್ತು. ಜತೆಗೆ ಪೊಲೀಸ್ ಇಲಾಖೆಯಲ್ಲಿ ತಮ್ಮನ್ನು ಸೂಪರ್ ಕಾಪ್ ಎಂದು ಬಿಂಬಿಸಿಕೊಳ್ಳಲು ಮುಂದಾಗಿದ್ದರು. ಘಟನೆ ನಡೆದ ಬಳಿಕ ವಾಜೆ, ನಕಲಿ ಟೆಲಿಗ್ರಾಂ ಖಾತೆ ಮೂಲಕ ಸಂದೇಶ ಕಳಿಸಿ ಇದು ಉಗ್ರರ ಕೃತ್ಯ ಎಂದು ಬಿಂಬಿಸಲು ಯತ್ನಿಸಿದ್ದರು.

ಮನ್ಸುಖ್ ಹಿರೇನ್ ಹತ್ಯೆಗೆ ಸುಪಾರಿ

ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಇನ್ನೊಬ್ಬ ಆರೋಪಿ ಮನ್ಸುಖ್ ಹಿರೇನ್ ಮೇಲೆ ವಾಜೆ ಒತ್ತಡ ಹೇರಿದ್ದರು. ಈ ಪ್ರಕರಣದ ಆರೋಪವನ್ನು ಹೊತ್ತು, ತಪ್ಪೊಪ್ಪಿಕೊಳ್ಳುವಂತೆ ಹೇಳಿದ್ದರು. ಆದರೆ ಇದಕ್ಕೆ ಹೀರೆನ್ ಒಪ್ಪಿಕೊಳ್ಳದ ಕಾರಣ ಅವರ ಹತ್ಯೆಗೆ ಮಾಜಿ ಎನ್​ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ವಗೆ ಸುಪಾರಿ ನೀಡಿದ್ದರು. 500 ರೂ. ನೋಟಿನ ಕಂತೆಗಳನ್ನು ಹೊಂದಿರುವ ದೊಡ್ಡ ಬ್ಯಾಗನ್ನು ಪ್ರದೀಪ್ ಶರ್ವಗೆ ವಾಜೆ ಕೊಟ್ಟಿದ್ದರು. ಇದಾದ ಕೆಲ ದಿನ ಬಳಿಕ ಹೀರೆನ್ ಮೃತ ದೇಹ ಪತ್ತೆಯಾಗಿತ್ತು. ಇದನ್ನು ಆತ್ಮಹತ್ಯೆ ಎಂದು ವಾಜೆ ಬಿಂಬಿಸಿದ್ದರು. ಸ್ಪೋಟಕ ಇದ್ದ ಕಾರಿನ ಮಾಲೀಕ ಹೀರೆನ್ ಈ ಪ್ರಕರಣದ ಪ್ರಮುಖ ಆರೋಪಿ ಎಂದು ವಾಜೆ ಪ್ರಕರಣ ದಾಖಲಿಸಿದ್ದರು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net