

ನವದೆಹಲಿ: ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಲು ತಮ್ಮ ಆಪ್ತ ಶಾಸಕರೊಂದಿಗೆ ದೆಹಲಿಗೆ ತೆರಳಿದ್ದ ಸಚಿನ್ ಪೈಲಟ್ಗೆ ಸೋನಿಯಾಗಾಂಧಿವರೊಂದಿಗೆ ಆಗಲಿ, ರಾಹುಲ್ ಗಾಂಧಿಯವರೊಂದಿಗೆ ಆಗಲಿ ಮಾತುಕತೆಗೆ ಅವಕಾಶ ಸಿಕ್ಕಿಲ್ಲ.
ಬದಲಿಗೆ, ಇಂದೇ ಜೈಪುರಕ್ಕೆ ತೆರಳಿ, ಅಶೋಕ್ ಗೆಹ್ಲೋಟ್ ನೇತೃತ್ವದಲ್ಲೇ ಕೆಲಸ ಮಾಡಿ. ಜು.13ರಂದು ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳಿ ಎಂದು ಸಚಿನ್ ಪೈಲಟ್ಗೆ ಹೈಕಮಾಂಡ್ ಸೂಚನೆ ನೀಡಿದೆ. ಅದಾದ ಕೆಲವೇ ಹೊತ್ತಲ್ಲಿ ಸಚಿನ್ ಪೈಲಟ್ ಕೂಡ, ತಾವು ಜೈಪುರಕ್ಕೆ ಹೋಗುವುದಿಲ್ಲ. ನಾಳಿನ ಸಭೆಗೆ ಹಾಜರಾಗುವುದಿಲ್ಲ ಎಂದಿದ್ದಾರೆ.
ಆದರೆ ಇದೀಗ ಇನ್ನೊಂದು ಮಾಹಿತಿ ಲಭ್ಯವಾಗಿದ್ದು, ಸಚಿನ್ ಪೈಲಟ್ ಅವರು ಇಂದು ಸಂಜೆ ದೆಹಲಿಯಲ್ಲಿ ತಮ್ಮ ಮಾಜಿ ಸಹೋದ್ಯೋಗಿ, ಸ್ನೇಹಿತ, ಈಗಿನ ಬಿಜೆಪಿ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ಸಚಿನ್ ಪೈಲಟ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರು ಸುಮಾರು 40 ನಿಮಷ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಾಜಸ್ಥಾನದ ರಾಜಕೀಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸಚಿನ್ ಪೈಲಟ್ ಜತೆ ದೆಹಲಿಗೆ ಹೋಗಿ, ಈಗ ಉಲ್ಟಾ ಹೊಡೆದ ಶಾಸಕರು; ನಾವು ಕಾಂಗ್ರೆಸ್ ಸೈನಿಕರು ಎಂದರು…!
ಜ್ಯೋತಿರಾದಿತ್ಯ ಸಿಂಧಿಯಾ ಅವರು ಇಂದು ಸಂಜೆ ಟ್ವೀಟ್ ಮಾಡಿ, ಕಾಂಗ್ರೆಸ್ನಲ್ಲಿ ಸಚಿನ್ ಪೈಲಟ್ಗೆ ಒಳ್ಳೆಯ ಸ್ಥಾನ ಕೊಡುತ್ತಿಲ್ಲ. ಆ ಪಕ್ಷದಲ್ಲಿ ಸಾಮರ್ಥ್ಯಕ್ಕೆ, ಬುದ್ಧಿವಂತಿಕೆಗೆ ಬೆಲೆ ಇಲ್ಲ ಎಂದಿದ್ದರು. ಅಷ್ಟೇ ಅಲ್ಲ, ಸಚಿನ್ ಪೈಲಟ್ ಪರಿಸ್ಥಿತಿ ನೋಡಿದರೆ ತುಂಬ ನೋವಾಗುತ್ತದೆ ಎಂದೂ ಹೇಳಿದ್ದರು.
ಇವರಿಬ್ಬರ ಭೇಟಿಯ ಬಳಿಕವೇ ಜ್ಯೋತಿರಾದಿತ್ಯ ಸಿಂಧಿಯಾ ಟ್ವೀಟ್ ಮಾಡಿದ್ದಾರೆ ಎಂದು ಅವರ ಆಪ್ತ ವಲಯಗಳಿಂದಲೇ ಮಾಹಿತಿ ಸಿಕ್ಕಿದೆ. (ಏಜೆನ್ಸೀಸ್)