ಚಿತ್ರನಗರಿ ನಿರ್ಮಾಣಕ್ಕೆ ಸಾಬರಹುಂಡಿ ಗ್ರಾಮಸ್ಥರ ವಿರೋಧ

Oplus_16908288
ನಂಜನಗೂಡು ತಾಲೂಕು ಇಮ್ಮಾವು ಕೈಗಾರಿಕಾ ಪ್ರದೇಶದ ಸಮೀಪದ ಸಾಬರಹುಂಡಿ ಗ್ರಾಮಸ್ಥರು ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವುದು.
Published on

ನಂಜನಗೂಡು: ಪ್ರಾಣ ಹೋದರೂ ಚಿತ್ರನಗರಿ ನಿರ್ಮಾಣಕ್ಕೆ ನಮ್ಮ ಭೂಮಿ ನೀಡುವುದಿಲ್ಲ ಎಂದು ಸಾಬರಹುಂಡಿ ಗ್ರಾಮಸ್ಥರು ಪಟ್ಟು ಹಿಡಿದು ಗುರುವಾರದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

ತಾಲೂಕಿನ ಇಮ್ಮಾವು ಕೈಗಾರಿಕಾ ಪ್ರದೇಶದ ಸಮೀಪದಲ್ಲಿ ಸಾಬರಹುಂಡಿ ಗ್ರಾಮದಲ್ಲಿ ಗ್ರಾಮಸ್ಥರು ದಲಿತ ಸಂಘರ್ಷ ಸಮಿತಿ ಬಣರಹಿತ ಜಿಲ್ಲಾ ಸಂಘಟನಾ ಸಂಚಾಲಕ ಆಲತ್ತೂರು ಶಿವರಾಜು ಮತ್ತು ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ಸಂಘಟನೆಯ ರಾಜ್ಯ ಉಪಾಧ್ಯಕ್ಷ ನವೀದ್ ಪಾಷ ನೇತೃತ್ವದಲ್ಲಿ ಧರಣಿ ಆರಂಭಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮುಸ್ಲಿಂ ಸಮುದಾಯದ ನಿವಾಸಿಗಳು ನಾಲ್ಕು ತಲೆಮಾರುಗಳಿಂದ ವಾಸ ಮಾಡುತ್ತಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದ್ದು, ಈಗಾಗಲೇ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಸಾಬರಹುಂಡಿ ಗ್ರಾಮಸ್ಥರನ್ನು ಹೊರಹಾಕಲು ಕೆಐಎಡಿಬಿ ಅಧಿಕಾರಿಗಳು ಪ್ರಯತ್ನ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿರುವ ಈ ಸ್ಥಳದಲ್ಲಿ ನಾವು ನಮ್ಮ ತಾತ ಮುತ್ತಾತನ ಕಾಲದಿಂದಲೂ ಹತ್ತಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದೇವೆ. ಸುಮಾರು 53 ಎಕರೆ ಪ್ರದೇಶದಲ್ಲಿ ನಾವು ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಎಲ್ಲ ದಾಖಲಾತಿಗಳು ನಮ್ಮಲ್ಲಿ ಇವೆ. ನಾವು ಯಾವುದೇ ಕಾರಣಕ್ಕೂ ನಮ್ಮ ಭೂಮಿಯನ್ನು ಬಿಟ್ಟು ಹೋಗುವುದಿಲ್ಲ. ಪರಿಹಾರ ಮತ್ತು ಸ್ಥಳಾಂತರ ಬೇಡವೇ ಬೇಡ. ಪ್ರಾಣ ಹೋದರು ನಾವು ನಮ್ಮ ಭೂಮಿಯನ್ನು ಬಿಡುವುದಿಲ್ಲ. ಒಂದು ವೇಳೆ ಭೂಮಿ ಸ್ವಾಧೀನಕ್ಕೆ ಮುಂದಾದರೆ ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಬೇಕಾಗುತ್ತದೆ. ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ನಿವಾಸಿಗಳು ಎಚ್ಚರಿಕೆ ನೀಡಿದರು.

ದಸಂಸ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆಲತ್ತೂರು ಶಿವರಾಜು ಮಾತನಾಡಿ, ಚಿತ್ರನಗರಿ ಎಂಬ ಹೆಸರಿನಲ್ಲಿ ಸರ್ಕಾರ ಇಲ್ಲಿ ವಾಸಿಸುವ ಜನರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ತಲೆತಲಾಂತರಗಳಿಂದ ವಾಸಿಸುತ್ತಿರುವ ಮುಸ್ಲಿಂಮರನ್ನು ಹೊರಹಾಕಲು ಪ್ರಯತ್ನ ಮಾಡುತ್ತಿದೆ. ಸಾಬರಹುಂಡಿ ಎಂಬ ಹೆಸರಿನಲ್ಲಿಯೇ ಎಲ್ಲ ದಾಖಲಾತಿಗಳನ್ನು ಸರ್ಕಾರವೇ ನೀಡಿದೆ.ಆದರೆ ಇಂದು ಅದೇ ಸರ್ಕಾರ ಯಾವುದೇ ದಾಖಲಾತಿಗಳು ಇಲ್ಲ ಎಂದು ಹೇಳಿ ಅವರನ್ನು ಬೀದಿಪಾಲು ಮಾಡಲು ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ನೊಂದಿರುವ ಜನರಿಗೆ ಸೂಕ್ತ ಭದ್ರತೆ ನೀಡಿ ಅವರ ಭೂಮಿಯನ್ನು ಅವರಿಗೆ ನೀಡುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಹೋರಾಟದ ದಾರಿ ಹಿಡಿಯಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ತಾಲೂಕು ಕಛೇರಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ಸಂಘಟನೆಯ ರಾಜ್ಯ ಉಪಾಧ್ಯಕ್ಷ ನವೀದ್ ಪಾಷ ಮಾತನಾಡಿ, ಈಗಾಗಲೇ ಚಿತ್ರನಗರಿ ಮಾಡಲು ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ನಮ್ಮ ಸಮುದಾಯದ ಜನರನ್ನು ಹೊರಹಾಕಲು ಪೊಲೀಸರು ಬೆದರಿಕೆ ಹಾಕಿ ಹಲ್ಲೆ ಮಾಡಿರುವುದು ಖಂಡನೀಯ. ಚಿತ್ರನಗರಿ ಮಾಡಲು ರೈತರು ಬೆಳೆಯುವ ಭೂಮಿಯೇ ಬೇಕಾ, ಯಾವುದೇ ಕಾರಣಕ್ಕೂ ನಾವು ನಮ್ಮ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ ಎಂದು ತಿಳಿಸಿದರು.

ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ರವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.ತಿಭಟನೆಯಲ್ಲಿ ಬಿಬಿ ಆಯಿಷಾ, ಮೋಸಿನ್, ಗುಲಾಬ್ ಜಾನ್, ಅಬ್ಬಾಸ್, ಚಾನ್ ಪಾಷಾ ಸೇರಿದಂತೆ ನಿವಾಸಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net