ಭಾರತ ವಿರುದ್ಧ ಸರಣಿಗೆ ಮುನ್ನ ದಕ್ಷಿಣ ಆಫ್ರಿಕಾಕ್ಕೆ ಹೊಡೆತ, ಪ್ರಮುಖ ವೇಗಿ ಅಲಭ್ಯ

nortje web
Published on

ಜೊಹಾನ್ಸ್‌ಬರ್ಗ್: ಪ್ರವಾಸಿ ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ದಕ್ಷಿಣ ಆಫ್ರಿಕಾ ತಂಡಕ್ಕೆ ಬಹುದೊಡ್ಡ ಆಘಾತವೊಂದು ಎದುರಾಗಿದೆ. ತಂಡದ ಪ್ರಮುಖ ವೇಗದ ಬೌಲರ್ ಅನ್ರಚ್ ನೋಕಿಯ ಗಾಯದಿಂದಾಗಿ ಸರಣಿಯ ಎಲ್ಲ 3 ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

12 ಟೆಸ್ಟ್‌ಗಳಲ್ಲಿ 47 ವಿಕೆಟ್ ಕಬಳಿಸಿರುವ ನೋಕಿಯಗೆ ಗಾಯದ ಸಮಸ್ಯೆ ಮರಳಿಸಿದೆ ಎಂದು ತಿಳಿಸಿರುವ ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ), ಅವರು ಯಾವ ರೀತಿಯ ಗಾಯದ ಸಮಸ್ಯೆ ಹೊಂದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಅಲ್ಲದೆ ಅವರಿಗೆ ಬದಲಿ ಆಟಗಾರನನ್ನೂ ಹೆಸರಿಸಿಲ್ಲ. ಸರಣಿಯ ಮೊದಲ ಟೆಸ್ಟ್ ಡಿ. 26ರಿಂದ ಸೆಂಚುರಿಯನ್‌ನಲ್ಲಿ ನಡೆಯಲಿದೆ.

ಜಗತ್ತಿನ ಹಾಲಿ ಅತ್ಯಂತ ವೇಗದ ಬೌಲರ್‌ಗಳಲ್ಲಿ ಒಬ್ಬರೆನಿಸಿರುವ 28 ವರ್ಷದ ನೋಕಿಯ, ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದಾರೆ. ನೋಕಿಯ ಗೈರಿನಲ್ಲಿ ಮತ್ತೋರ್ವ ವೇಗಿ ಕಗಿಸೊ ರಬಾಡ ದಕ್ಷಿಣ ಆಫ್ರಿಕಾ ತಂಡದ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ.

ನೋಕಿಯ ಗೈರು ಸರಣಿಯಲ್ಲಿ ದಕ್ಷಿಣ ಆಫ್ರಿಕಾಕ್ಕೆ 2ನೇ ಹಿನ್ನಡೆ ಎನಿಸಿದೆ. ವಿಕೆಟ್ ಕೀಪರ್-ಬ್ಯಾಟರ್ ಕ್ವಿಂಟನ್ ಡಿಕಾಕ್ ಪಿತೃತ್ವ ರಜೆಯಿಂದಾಗಿ ಸರಣಿಯ 2 ಮತ್ತು 3ನೇ ಟೆಸ್ಟ್‌ನಿಂದ ಹೊರಗುಳಿಯುವುದು ಈಗಾಗಲೆ ಖಚಿತಗೊಂಡಿದೆ. ಡಿಕಾಕ್ ಪತ್ನಿ ಸಾಶಾ ಮೊದಲ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net