ಜಲಪಾತದಲ್ಲಿ ಸೆಲ್ಫಿ ತೆಗೆಯಲು ಹೋಗಿ 50 ಅಡಿ ಬಿದ್ದ ಪಾವಗಡದ ಯುವಕ- ಮುಂದಾದದ್ದು ದುರಂತ!

selfie
Published on

ಚಿಕ್ಕಮಗಳೂರು: ನಿನ್ನೆ ಸಂಜೆಯ ವೇಳೆ ಇಲ್ಲಿಗೆ ಚಾರ್ಮಾಡಿ ಘಾಟ್‌ನ ಅಲೆಖಾನ್ ಜಲಪಾತದಲ್ಲಿ ಸೆಲ್ಫಿ ತೆಗೆಯಲು ಹೋಗಿ ಯುವಕನೊಬ್ಬ ಕಾಲು ಜಾರಿ ಸುಮಾರು 50 ಅಡಿ ಆಳಕ್ಕೆ ಬಿದ್ದಿದ್ದಾನೆ. ಘಟನೆಯಲ್ಲಿ ಪ್ರಾಣಕ್ಕೆ ಹಾನಿಯಾಗದಿದ್ದರೂ ಕೈ-ಕಾಲು ಮುರಿದುಕೊಂಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ.

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪ ಆಲೇಖಾನ್ ಜಲಪಾತವಿದ್ದು ಇಲ್ಲಿ ಪಾವಗಡ ಮೂಲದ ಅಭಿಷೇಕ್ ಎಂಬ ಯುವಕ ಸೆಲ್ಫಿ ತೆಗೆದುಕೊಳ್ಳುವ ಸಾಹಸ ಮಾಡಿದ್ದ ವೇಳೆ ಈ ಘಟನೆ ಸಂಭವಿಸಿದೆ. ಸದ್ಯ ಯುವಕನನ್ನ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಕಂಪನಿಯೊಂದರ ಟವರ್ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ವಾಹನದಲ್ಲಿದ್ದ ಅಭಿಷೇಕ್‌ ತನ್ನ ಸ್ನೇಹಿತರ ಜತೆಗೆ ಬಂದಿದ್ದ. ರಾತ್ರಿ ಸುಮಾರು 7 ಗಂಟೆಗೆ ಆಲೇಕಾನ್ ಜಲಪಾತದ ಬಳಿ ಸೆಲ್ಫಿ ತೆಗೆಯಲು ಹೋಗಿದ್ದಾಗ ಈ ಘಟನೆ ನಡೆದಿದೆ.

ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದರಿಂದ ಆಂಬ್ಯುಲೆನ್ಸ್ ಬಂದು ಯುವಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಈ ಸ್ಥಳದಲ್ಲಿ ಈ ಹಿಂದೆ ಕೂಡ ಇಂಥದ್ದೇ ಘಟನೆ ನಡೆದಿದೆ. ಆದ್ದರಿಂದ ಇಲ್ಲಿ ಎಚ್ಚರಿಕೆಯ ಫಲಕ ಕೂಡ ಅಳವಡಿಸಲಾಗಿತ್ತು. ಆದರೆ ಮಳೆಯಿಂದ ಫಲಕ ಕೊಚ್ಚಿ ಹೋಗಿದ್ದು, ಸೆಲ್ಫಿ ಹುಚ್ಚಿಗೆ ಜನರು ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆ ನಡೆಯುತ್ತಲೇ ಸಾಗಿದೆ ಎಂದಿದ್ದಾರೆ ಸ್ಥಳೀಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net