

ಮುಂಬೈ: ಮಹಾರಾಷ್ಟ್ರ ಸರ್ಕಾರ ಅಲ್ಲೋಲ ಕಲ್ಲೋಲ ಆಗಿರುವ ನಡುವೆಯೇ ಒಂಟಿಯಾಗಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇದೀಗ ಹೊಸ ಪ್ಲ್ಯಾನ್ ಮಾಡಿದ್ದಾರೆ. ಬಂಡಾಯ ಶಾಸಕರನ್ನು ಅನರ್ಹಗೊಳಿಸಲು ನೀಡಲಾಗಿದ್ದ ನೊಟೀಸ್ಗೆ ಸುಪ್ರೀಂಕೋರ್ಟ್ ತಾತ್ಕಾಲಿಕ ತಡೆ ನೀಡುವ ಮೂಲಕ ಠಾಕ್ರೆಯವರಿಗೆ ಮತ್ತಷ್ಟು ಆಘಾತವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೆಬೆಲ್ಗಳಿಗೆ ಮನವಿ ಮಾಡಿದ್ದಾರೆ.
ಅಸ್ಸಾಂನ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಶಿವಸೇನೆಯ ಶಾಸಕರಿಗೆ ಮನವಿ ಮಾಡಿಕೊಂಡಿರುವ ಠಾಕ್ರೆ, "ನಿಮ್ಮ ಭಾವನೆಗಳನ್ನು ನಾವು ಗೌರವಿಸುತ್ತೇನೆ. ಅಂತರಂಗದಿಂದ ನೀವಿನ್ನೂ ಶಿವಸೇನೆಯಲ್ಲಿ ಇದ್ದೀರಿ. ಇಲ್ಲಿ ಬಂದು ಚರ್ಚಿಸಿ, ಜತೆಯಲ್ಲಿಯೇ ಕುಳಿತು ಮಾತನಾಡೋಣ' ಎಂದಿದ್ದಾರೆ.
"ಗುವಾಹಟಿಯಲ್ಲಿರುವ ಅನೇಕ ಶಾಸಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ನಿಮ್ಮ ಕುಟುಂಬದ ಕೆಲ ಸದಸ್ಯರೂ ನನ್ನ ಸಂಪರ್ಕದಲ್ಲಿದ್ದು, ನಿಮ್ಮ ಭಾವನೆಗಳ ಬಗ್ಗೆ ತಿಳಿಸಿದ್ದಾರೆ. ನಿಮ್ಮಲ್ಲಿ ಏನೇ ಗೊಂದಲ ಇದ್ದರೂ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ. ಒಟ್ಟಿಗೆ ಕುಳಿತು ದಾರಿ ಹುಡುಕೋಣ. ನನ್ನ ಮುಂದೆ ಬಂದು ಮಾತನಾಡಿದರೆ ಖಂಡಿತವಾಗಿ ದಾರಿ ಸಿಗಲಿದೆ ಎಂದು ಮನವಿ ಮಾಡಿದ್ದಾರೆ.
ಶಿವಸೇನೆ ನಿಮ್ಮೆಲ್ಲರಿಗೂ ಕೊಟ್ಟಷ್ಟು ಗೌರವ ಇನ್ಯಾವ ಪಕ್ಷದಲ್ಲೂ ದಕ್ಕುವುದಿಲ್ಲ, ಇನ್ನೂ ತಡವಾಗಿಲ್ಲ. ಬಂದು ನನ್ನ ಮುಂದೆ ಕುಳಿತುಕೊಳ್ಳಿ. ಮುಂಬೈಗೆ ಬನ್ನಿ. ಮಾತನಾಡೋಣ ಎಂದಿದ್ದಾರೆ.