

ಸಿರೋಹಿ (ರಾಜಸ್ಥಾನ) : “ನಾವು ಸಾಯುವವರೆಗೂ ನೆಹರೂ ಹಾಗೂ ಗಾಂಧಿ ಕುಟುಂಬದ ಗುಲಾಮರೆ, ಏನಿವಾಗ ಎಂದು ರಾಜಸ್ಥಾನದ ಸಿರೋಹಿ ಶಾಸಕ ಸನ್ಯಾಮ್ ಲೋಧಾ ಹೇಳಿದ್ದಾರೆ.
ರಾಜಸ್ಥಾನ ವಿಧಾನಸಭಾ ಕಲಾಪದಲ್ಲಿ ಅವರು, ನಾವು ನೆಹರೂ-ಗಾಂಧಿ ಕುಟುಂಬದ ಗುಲಾಮರು ಮತ್ತು ಕೊನೆಯ ಉಸಿರು ಇರುವವರೆಗೂ ಅವರ ಗುಲಾಮರಾಗಿಯೇ ಇರುತ್ತೇವೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಪಂಚ ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ ಬಳಿಕ ನಾಯಕತ್ವದ ಕುರಿತಂತೆ ಪಕ್ಷದಲ್ಲಿಯೇ ಭಿನ್ನ ನಿಲುವು ವ್ಯಕ್ತವಾಗುತ್ತಿದ್ದಂತೆಯೇ, ಇದರ ಚರ್ಚೆಯ ವೇಳೆ ಶಾಸಕರು ಈ ಮಾತನ್ನು ಹೇಳಿದ್ದಾರೆ.
ನೆಹರು-ಗಾಂಧಿ ಕುಟುಂಬವು ದೇಶವನ್ನು ಪ್ರಗತಿಯತ್ತ ಕೊಂಡೊಯ್ದಿದೆ. ಉತ್ತಮ ಆಡಳಿತವನ್ನು ನೀಡಿದೆ. ಹಾಗಾಗಿ ನಾವು ಕೊನೆ ಉಸಿರಿರುವವರೆಗೂ ಆ ಕುಟುಂಬದ ಗುಲಾಮರಾಗಿಯೇ ಇರಲು ಬಯಸುತ್ತೇವೆ ಎಂದು ಹೇಳಿದ್ದಾರೆ.
ಅಂದಹಾಗೆ ಸನ್ಯಾಮ್ ಲೋಧಾ ಅವರು ಶಾಸಕರ ಜತೆಗೆ, ಅವರು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಲಹೆಗಾರರೂ ಹೌದು.
ಲೋಧಾ ಇವರ ಮಾತಿಗೆ ಬಿಜೆಪಿ ಭಾರಿ ಟೀಕೆ ವ್ಯಕ್ತಪಡಿಸಿದೆ. ಗುಲಾಮರಾಗಿರುವುದಕ್ಕೆ ನಿಮಗೆ ಅಭಿನಂದನೆಗಳು. ಗುಲಾಮರಾಗಿರುವ ಇವರು, ಸಮಾಜಕ್ಕೆ ಯಾವ ಸಂದೇಶ ನೀಡುತ್ತಾರೆ?. ಗುಲಾಮರು ತಮ್ಮ ಮನಸ್ಪೂರ್ತಿಯಾಗಿ ನಡೆದುಕೊಳ್ಳಲು, ಮಾತನಾಡಲು ಸಾಧ್ಯವಿಲ್ಲ, ಅದನ್ನು ಇವರು ಸ್ವತಃ ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ರಾಜೇಂದ್ರ ರಾಥೋಡ್ ಟೀಕಿಸಿದ್ದಾರೆ.