VIDEO: ನಡುರಸ್ತೆಯಲ್ಲಿ ಬಿಜೆಪಿ ಶಾಸಕನ ಮೇಲೆ ಕೆಸರು ಎರಚಿದ ಮಹಿಳೆಯರು: ಇದು ಸಿಟ್ಟಲ್ಲ... ಹಾಗಿದ್ರೆ ಏನು ಅಂತೀರಾ?

MLA
Published on

ಲಖನೌ (ಉತ್ತರ ಪ್ರದೇಶ): ಪೂರ್ವ ಉತ್ತರ ಪ್ರದೇಶದಲ್ಲಿ ಹಾರಾಜ್​ಗಂಜ್ ಗ್ರಾಮಸ್ಥರೆಲ್ಲಾ ಸೇರಿ ಸ್ಥಳೀಯ ಬಿಜೆಪಿ ಶಾಸಕ ಹಾಗೂ ನಗರಸಭೆ ಮುಖ್ಯಸ್ಥರ ಮೇಲೆ ಕೆಸರು ಎರಚಿದ್ದಾರೆ. ನಡುರಸ್ತೆಯಲ್ಲಿ ಎಲ್ಲರನ್ನೂ ನಿಲ್ಲಿಸಿ ಅವರ ಮೇಲೆ ಕೆಸರು ಎರಚಿದ್ದಾರೆ. ಈ ಘಟನೆಗೆ ಗ್ರಾಮಸ್ಥರೆಲ್ಲರೂ ಸಾಕ್ಷಿಯಾಗಿದ್ದು, ಮುಖಂಡರು ಕೂಡ ಖುಷಿಯಿಂದ ಕೆಸರು ಎರಚಿಸಿಕೊಂಡಿದ್ದಾರೆ.

ಕೆಸರು ಎರಚಿರುವ ಉದ್ದೇಶ ಮಳೆ. ಪೂರ್ವ ಉತ್ತರ ಪ್ರದೇಶದಲ್ಲಿ ಮುಂಗಾರು ಕೈಕೊಟ್ಟಿದ್ದು, ಜನತೆ ಕಂಗಾಲಾಗಿದ್ದು ವರುಣ ದೇವನ ಕೃಪೆಗಾಗಿ ಮುಖಂಡರಿಗೆ ಕೆಸರು ಸ್ನಾನ ಮಾಡಿಸಿದ್ದಾರೆ. ಆ ಪ್ರದೇಶದ ಮುಖ್ಯಸ್ಥರಿಗೆ ಕೆಸರಿನಲ್ಲಿ ಸ್ನಾನ ಮಾಡಿಸಿದರೆ ಮಳೆ ದೇವರು ವರುಣ ಪ್ರಸನ್ನನಾಗಿ ಆ ಊರಿಗೆ ಮಳೆ ಬರುತ್ತದೆ ಎಂಬ ನಂಬಿಕೆ ಇಲ್ಲಿದೆ.

ಈ ಹಿನ್ನೆಲೆಯಲ್ಲಿ ಸ್ಥಳೀಯ ಮೂಲಗಳ ಪ್ರಕಾರ ಮಹಿಳೆಯರು ಬಿಜೆಪಿ ಶಾಸಕ ಜೈ ಮಂಗಲ್ ಕನೌಜಿಯಾ ಹಾಗೂ ನಗರಸಭೆ ಅಧ್ಯಕ್ಶರಾದ ಕೃಷ್ಣ ಗೋಪಾಲ್ ಜೈಸ್ವಾಲ್ ಅವರಲ್ಲಿ ಮನವಿ ಮಾಡಿದ್ದು ಈ ಪ್ರಾರ್ಥನೆಯ ಭಾಗವಾಗಿರಬೇಕೆಂದು ಕೇಳಿಕೊಂಡಿದ್ದಾರೆ. ಮಹಿಳೆಯರ ಮನವಿಯನ್ನು ಮನ್ನಿಸಿರುವ ಇಬ್ಬರೂ ನಾಯಕರೂ ತಮ್ಮ ಮೇಲೆ ಕೆಸರಿನ ನೀರನ್ನು ಹಾಕಿಸಿಕೊಂಡಿದ್ದಾರೆ.

ಇಂದ್ರದೇವನನ್ನು ಒಲಿಸಲು ಊರಿನ ಪ್ರಮುಖ ವ್ಯಕ್ತಿಗಳ ಜತೆಗೆ ಮಕ್ಕಳಿಗೂ ಕೆಸರು ಸ್ನಾನ ಮಾಡಿಸಲಾಗುತ್ತದೆ. ಇದನ್ನು ಇಲ್ಲಿ ಕಲ್ ಕಲೌತಿ ಎಂದು ಕರೆಯಲಾಗುತ್ತದೆ. ಹೀಗೆ ಕಲ್ ಕಲೌತಿ ಆಚರಿಸಿರುವ ಮಹಿಳೆಯರು ಕೆಸರು ನೀರು ಎರಚಿ ಹಾಡು ಹಾಡಿ ನರ್ತಿಸಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net