

ಸೆಲ್ಖೇಡಾ(ಉತ್ತರ ಪ್ರದೇಶ): ಮೊಬೈಲ್ ಫೋನ್ನಲ್ಲಿ ಮಾತನಾಡುವಾಗ ಮಾತನಾಡಿದ್ದನ್ನು ರಿಕಾರ್ಡ್ ಮಾಡಿಕೊಳ್ಳುವ ಅವಕಾಶ ಹಲವು ಸ್ಮಾರ್ಟ್ಫೋನ್ಗಳಲ್ಲಿವೆ. ಕೆಲವು ಫೋನ್ಗಳಲ್ಲಿ ಎಲ್ಲಾ ಕರೆಗಳೂ ಸ್ವಯಂ ಆಗಿ ರೆಕಾರ್ಡ್ ಆಗುತ್ತವೆ. ಅಂಥದ್ದೇ ಒಂದು ಫೋನ್ನಿಂದ ಖತರ್ನಾಕ್ ಪತ್ನಿಯೊಬ್ಬಳು ಪೊಲೀಸರ ಬಲೆಗೆ ಬಿದ್ದಿದ್ದಾಳೆ!
ಪತಿಯನ್ನು ಕೊಲೆ ಮಾಡಿ ಅದನ್ನು ಆಕಸ್ಮಿಕವೆಂದು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದ ಉತ್ತರ ಪ್ರದೇಶದ ಮಥರಾ ಜಿಲ್ಲೆಯ ಸೆಲ್ಖೇಡಾ ಗ್ರಾಮದ ಪತ್ನಿಯೊಬ್ಬಳ ಭಯಾನಕ ಪ್ಲ್ಯಾನ್ ಬಯಲಾಗಿದ್ದು ಸ್ಮಾರ್ಟ್ಫೋನ್ನಲ್ಲಿರೋ ಆಟೊಮ್ಯಾಟಿಕ್ ಕಾಲ್ ರಿಕಾರ್ಡಿಂಗ್ನಿಂದಾಗಿ.
ಮದುವೆಯಾದ 15 ದಿನಗಳಲ್ಲೇ ಪತಿಗೆ ಕರೆಂಟ್ ಶಾಕ್ ಕೊಟ್ಟು ಸಾಯಿಸಿದ್ದ ಪಾತಕಿಯನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಪ್ರಿಯಕರನ ಜತೆಗೂಡಿ ಈಕೆ ಇಂಥದ್ದೊಂದು ಕೃತ್ಯ ಎಸಗಿದ್ದಳು. ಮನ್ವೇಂದ್ರ ಎಂಬುವವರ ಜತೆ ಈಕೆ ಮದುವೆ ಕಳೆದ ಮಾರ್ಚ್ 26ರಂದು ನಡೆದಿತ್ತು. ಮದುವೆಯಾದ 15 ದಿನಗಳಲ್ಲೇ ಅಂದರೆ ಏಪ್ರಿಲ್ 9ರ ರಾತ್ರಿ ಪತಿ ವಿದ್ಯುತ್ಸ್ಪರ್ಶದಿಂದ ಮೃತಪಟ್ಟಿದ್ದರು. ತನ್ನ ಪತಿಗೆ ವಿದ್ಯುತ್ ಸ್ಪರ್ಶವಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ ಎಂದು ಕುಟುಂಬಸ್ಥರಿಗೆ ಈಕೆ ಮಾಹಿತಿ ನೀಡಿದ್ದಳು. ಎಲ್ಲರೂ ಆಗಮಿಸಿ ಮನ್ವೇಂದ್ರ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಅವರು ಮೃತಪಟ್ಟಿದ್ದರು.
ಪತಿಯ ಮೃತದೇಹದ ಮುಂದೆ ಈ ಖತರ್ನಾಕ್ ಪತ್ನಿ ಮಾಡಿದ್ದ ಗೋಳಾಟ ನೋಡಿ, ಆಕೆಯೇ ಕೊಲೆ ಮಾಡಿದ್ದು ಎಂದು ಪೊಲೀಸರಿಗೂ ಅನುಮಾನ ಬರಲೇ ಇಲ್ಲ. ಪತಿಯ ಕುಟುಂಬಸ್ಥರಿಗೂ ಈ ವಿಷಯ ತಿಳಿಯಲಿಲ್ಲ. ಪೊಲೀಸರು ಆಕಸ್ಮಿಕ ಸಾವು ಎಂದು ಪರಿಗಣಿಸಿ ಅಲ್ಲಿಗೆ ಇತ್ಯರ್ಥ ಪಡಿಸಿದ್ದರು.
ಪತಿಯನ್ನು ಕೊಂದು ಪ್ರಿಯಕರನ ಜತೆ ಖುಷಿಯಿಂದ ಇದ್ದಳು ಈ ಪತ್ನಿ. ಆದರೆ ಈಕೆಯ ಗ್ರಹಚಾರ ಕೆಟ್ಟಿದ್ದು, ಮೃತ ಮುನ್ವೇಂದ್ರ ಅವರ ತಂದೆಗೆ ಮಗನ ಫೋನ್ ಸಿಕ್ಕಿದಾಗ. ಯಾರಿಗಾದರೂ ಫೋನ್ ಮಾಡುವಾಗ ಈಕೆ ಪತಿಯ ಸ್ಮಾರ್ಟ್ಫೋನ್ ಬಳಸುತ್ತಿದ್ದಳು. ಆದರೆ ಅದರಲ್ಲಿ ಎಲ್ಲಾ ಕರೆಗಳು ರಿಕಾರ್ಡ್ ಆಗುತ್ತವೆ ಎನ್ನುವ ಮಾಹಿತಿ ಇರಲಿಲ್ಲ.
ಮಗ ಮೃತಪಟ್ಟ ಕೆಲ ದಿನಗಳ ಬಳಿಕ ಅವರ ತಂದೆ ಫೋನ್ ಪರಿಶೀಲಿಸಿದ್ದಾರೆ. ಅದರಲ್ಲಿ ಕಾಲ್ ರೆಕಾರ್ಡಿಂಗ್ ನೋಡಿದಾಗ ಅವರಿಗೆ ಶಾಕ್ ಆಗಿದೆ. ಅದರಲ್ಲಿನ ಒಂದು ಕರೆಯಲ್ಲಿ, 'ನಿಮ್ಮ ಸೂಚನೆಯಂತೆ 10 ನಿಮಿಷ ಕರೆಂಟ್ ಶಾಕ್ ಕೊಟ್ಟಿದ್ದೇನೆ. ಈಗ 10 ನಿಮಿಷಗಳ ನಿಜವಾಗಿಯೂ ಸಾಯುತ್ತಾನೆ ಅಲ್ವಾ' ಎಂದೂ ಕೇಳಿದ್ದಾಳೆ. ಮತ್ತೊಂದು ಕಡೆಯಿಂದ ಬಂದ ಪುರುಷನ ಧ್ವನಿಯಲ್ಲಿ, ಖಂಡಿತ ಸಾಯುತ್ತಾನೆ ಎಂದು ಹೇಳಿರುವುದು ರೆಕಾರ್ಡ್ ಆಗಿತ್ತು.
ಮಾತ್ರವಲ್ಲದೇ, 'ರಾತ್ರಿ 11 ಗಂಟೆಗೆ ಬಂದು ಭೇಟಿಯಾಗುತ್ತೇನೆ ಎಂದು ಮಾತು ಕೊಟ್ಟಿದ್ದೆ.. ಯಾಕೆ ಬರಲಿಲ್ಲ' ಎಂಬುವುದೂ ಅದರಲ್ಲಿ ರಿಕಾರ್ಡ್ ಆಗಿದೆ. ನಂತರ ಮುನ್ವೇಂದ್ರ ಅವರ ತಂದೆಗೆ ಅನುಮಾನ ಬಂದು ಪೊಲೀಸರಿಗೆ ವಿಷಯ ತಿಳಿಸಿದಾಗ ನಿಜಾಂಶ ಬಯಲಿದೆ ಬಂದಿದೆ. ಸದ್ಯ ಮುನ್ವೇಂದ್ರನ ಪತ್ನಿ ಹಾಗೂ ಆತನ ಪ್ರಿಯಕರ ಅರೆಸ್ಟ್ ಆಗಿದ್ದಾರೆ. ಪತಿಗೆ ಮತ್ತು ಬರುವ ವಸ್ತು ನೀಡಿ ಪ್ರಜ್ಞೆ ತಪ್ಪಿಸಿ ನಂತರ ಕರೆಂಟ್ ಶಾಕ್ ಕೊಟ್ಟು ಕೊಲೆ ಮಾಡಿರುವುದಾಗಿ ಮನ್ವೇಂದ್ರನ ಪತ್ನಿ ಬಾಯಿ ಬಿಟ್ಟಿದ್ದಾಳೆ. (ಏಜೆನ್ಸೀಸ್)