

ಹೈದರಾಬಾದ್ (ತೆಲಂಗಾಣ): ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿಯವರು ಸದ್ಯ ಸಾಮಾಜಿಕ ಜಾಲತಾಣದ ಹಾಟ್ ಟಾಪಿಕ್ ಆಗಿದ್ದಾರೆ. ಮೊನ್ನೆಯಷ್ಟೇ ನೇಪಾಳದ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡು ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ ರಾಹುಲ್. ಮದ್ಯದ ಬಾಟಲಿಗಳಿಂದ ತುಂಬಿರುವ ಪಾರ್ಟಿಯಲ್ಲಿ ಮದ್ಯ ಹೀರುತ್ತಿರುವ ಯುವತಿಯೊಬ್ಬಳ ಪಕ್ಕ ಕಾಣಿಸಿಕೊಂಡು ಹಲವಾರು ರೀತಿಯ ಟೀಕೆಗಳಿಗೆ ಗುರಿಯಾಗಿರುವ ರಾಹುಲ್ ಗಾಂಧಿಯವರಿಗೆ ಇದೀಗ ಹೊಸದೊಂದು ಸವಾಲು ಎದುರಾಗಿದೆ.
ನೇಪಾಳಕ್ಕೆ ಇವರು ಸ್ನೇಹಿತೆಯೊಬ್ಬರ ಮದುವೆಗೆಂದು ಹೋಗಿದ್ದು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದರೂ ನೆಟ್ಟಿಗರ ಬಾಯಿ ಸದ್ಯ ಮುಚ್ಚುತ್ತಿಲ್ಲ. ಅವರ ಪಾರ್ಟಿಯ ವಿಡಿಯೋ ಶೇರ್ ಆಗುತ್ತಲೇ ಇದೆ.
ಇದರ ನಡುವೆಯೇ ತೆಲಂಗಾಣದಲ್ಲಿಯೂ ರಾಹುಲ್ ಗಾಂಧಿಯವರಿಗೆ ಭಾರಿ ಮುಖಭಂಗವಾಗಿದೆ. ಅದೇನೆಂದರೆ ತೆಲಂಗಾಣ ಪ್ರವಾಸ ಕೈಗೊಂಡು ಇಲ್ಲಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಇಂಗಿತವನ್ನು ರಾಹುಲ್ ವ್ಯಕ್ತಪಡಿಸಿದ್ದರು. ಆದರೆ ಸರ್ಕಾರ ಅದಕ್ಕೆ ಅನುಮತಿ ನೀಡಿರಲಿಲ್ಲ. ಕಾಲೇಜಿನ ಕ್ಯಾಂಪಸ್ನಲ್ಲಿ ಯಾವುದೇ ರೀತಿಯ ರಾಜಕೀಯ ಬೇಡ ಎಂಬ ಕಾರಣ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದಕ್ಕೆ ಸರ್ಕಾರ ಅನುಮತಿ ನೀಡಿರಲಿಲ್ಲ.
ಕೆಲ ವಿದ್ಯಾರ್ಥಿಗಳು ಸರ್ಕಾರದ ಈ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರೆ, ಹಲವು ವಿದ್ಯಾರ್ಥಿಗಳು ರಾಹುಲ್ ಗಾಂಧಿ ವಿರುದ್ಧ ಬ್ಯಾನರ್ಗಳನ್ನು ಹಿಡಿದುಕೊಂಡಿದ್ದಾರೆ. ಹಲವಾರು ಬ್ಯಾನರ್ಗಳು ತೆಲಂಗಾಣದ ತುಂಬ ರಾರಾಜಿಸುತ್ತಿದ್ದು, ರಾಹುಲ್ ಜೀ... ನೀವು ವೈಟ್ ಚಾಲೆಂಜ್ಗೆ ರೆಡಿ ಇದ್ದೀರಾ ಎಂದು ಪ್ರಶ್ನಿಸಲಾಗುತ್ತಿದೆ.
ಅಷ್ಟಕ್ಕೂ ವೈಟ್ ಚಾಲೆಂಜ್ ಎಂದರೆ ಏನು ಎಂಬ ಬಗ್ಗೆ ಹಲವರಿಗೆ ತಿಳಿದಿರಲಿಕ್ಕಿಲ್ಲ. ಇದು ಡ್ರಗ್ಸ್ ಕೇಸ್ ಜತೆ ಥಳಕು ಹಾಕಿಕೊಂಡಿರುವ ಶಬ್ದ. ಇತ್ತೀಚಿಗೆ ಡ್ರಗ್ಸ್ ಮಾಫಿಯಾ ಭಾರಿ ಸುದ್ದಿ ಮಾಡುತ್ತಿದ್ದ ಸಂದರ್ಭದಲ್ಲಿ ತೆಲಂಗಾಣದಲ್ಲಿ ಕೂಡ ಸಾಕಷ್ಟು ಇದು ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿತ್ತು. ಟಾಲಿವುಡ್ನಲ್ಲಿ ಡ್ರಗ್ಸ್ ಪ್ರಕರಣದ ಕುರಿತು ಭಾರಿ ಸುದ್ದಿಯಾಗಿದ್ದ ವೇಳೆ ಹುಟ್ಟಿಕೊಂಡಿದ್ದು ಈ ವೈಟ್ ಚಾಲೆಂಜ್.
ಡ್ರಗ್ಸ್ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡು ಕಾಂಗ್ರೆಸ್ ಹಾಗೂ ಟಿಆರ್ಎಸ್ ಪಕ್ಷಗಳ ಮುಖಂಡರು ಪರಸ್ಪರ ಕಿತ್ತಾಡುತ್ತಿದ್ದರು. ಡ್ರಗ್ಸ್ ಪ್ರಕರಣ ಆರೋಪಿಗಳ ರಕ್ಷಣೆಗೆ ಟಿಆರ್ಎಸ್ ನಾಯಕರು ಪ್ರಯತ್ನಿಸುತ್ತಿದ್ದಾರೆಂದು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಆರೋಪಿಸಿದ್ದರು. ಒಂದು ವೇಳೆ ನೀವು ತಪ್ಪು ಮಾಡಿಲ್ಲ ಎಂದರೆ ನಾರ್ಕೊಟಿಕ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಸವಾಲು ಹಾಕಿದ್ದರು. ಸಚಿವ ಕೆಟಿಆರ್ ಹಾಗೂ ಮಾಜಿ ಸಂಸದ ಕೊಂಡ ವಿಶ್ವೇಶ್ವರ್ ರೆಡ್ಡಿಗೆ ರೇವಂತ್ ರೆಡ್ಡಿ ಚಾಲೆಂಜ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೆಟಿಆರ್, ತಾವು ಯಾವುದೇ ಪರೀಕ್ಷೆಗೆ ಸಿದ್ಧ, ದೆಹಲಿ ಏಮ್ಸ್ಗೆ ಬರುತ್ತೇನೆ. ಆದರೆ, ಈ ಸವಾಲಿನಲ್ಲಿ ರಾಹುಲ್ ಗಾಂಧಿ ಭಾಗಿಯಾಗಬೇಕೆಂದು ತಿರುಗೇಟು ನೀಡಿದ್ದರು. ಡ್ರಗ್ಸ್ ಅನ್ನು ವೈಟ್ ಎನ್ನುವ ಅರ್ಥದಲ್ಲಿ ಬಳಸಿ ‘ವೈಟ್ ಚಾಲೆಂಜ್’ ಎಂಬ ಪದ ಬಳಸಲಾಗಿತ್ತು.