

ಚೆನ್ನೈ: ಕೆಲವು ರಾಜ್ಯಗಳಲ್ಲಿ ಈಗ ಚುನಾವಣೆ ಭರಾಟೆ ಜೋರಾಗಿ ನಡೆಯುತ್ತಿದೆ. ಅದೇ ರೀತಿ ತಮಿಳುನಾಡಿನಲ್ಲಿ ಕೂಡ ಭರಾಟೆ ಜೋರಾಗಿದೆ. ಈ ನಡುವೆಯೇ ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಯಲು ಇಚ್ಛಿಸಿರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ.
ತಂಜಾವೂರು ಕ್ಷೇತ್ರದಿಂದ ಅಭ್ಯರ್ಥಿಯೊಬ್ಬರು ಕೈಯಲ್ಲಿ ಕಲ್ಲಂಗಡಿ ಹಿಡಿದು ಬಂದು ಕೆಲ ದಿನಗಳ ಹಿಂದೆ ಭಾರಿ ಸುದ್ದಿಯಾಗಿದ್ದರು. ಅದೇ ರೀತಿ ಇನ್ನೊಬ್ಬ ಅಭ್ಯರ್ಥಿ ಪಿಪಿಇ ಕಿಟ್ ಧರಿಸಿಬಂದಿದ್ದರು.
ಇವೆಲ್ಲರಿಗಿಂತ ಭಿನ್ನವಾಗಿ ಇಲ್ಲೊಬ್ಬ ಅಭ್ಯರ್ಥಿ ಮೈಮೇಲೆ ಬರೋಬ್ಬರಿ ಐದು ಕೆ.ಜಿ. ತೂಕದ ಚಿನ್ನ ಧರಿಸಿ ನಾಮಪತ್ರ ಸಲ್ಲಿಸಲು ಬಂದಿದ್ದರು. ನಾಮಪತ್ರ ಸ್ವೀಕರಿಸುತ್ತಿರುವವರು ಮಾತ್ರವಲ್ಲದೇ ಅಲ್ಲಿ ನೆರೆದಿದ್ದರ ಅಕ್ಕ ಪಕ್ಕದ ಜನರೆಲ್ಲಾ ಇವರನ್ನು ಬಿಟ್ಟ ಕಣ್ಣುಗಳಿಂದಲೇ ನೋಡುತ್ತಿದ್ದುದು ವಿಶೇಷವಾಗಿತ್ತು.
ಈ ರೀತಿ ಭರ್ಜರಿ ಚಿನ್ನಾಭರಣ ಧರಿಸಿ ಬಂದಿದ್ದ ಅಭ್ಯರ್ಥಿ ತಿರುನೆಲ್ವೇಲಿ ಜಿಲ್ಲೆಯ ಆಲಂಗುಲಂ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿರುವ ಹರಿ ನಾದರ್.
ಕೈ, ಕುತ್ತಿಗೆಗಳಲ್ಲಿ ಭರ್ಜರಿ ಚಿನ್ನಾಭರಣ ಹೊತ್ತುಕೊಂಡು ಬಂದಿದ್ದ ಇವರು ನಂತರ ಇವೆಲ್ಲಾ ಸೇರಿ ಐದು ಕೆ.ಜಿ. ಇರುವುದಾಗಿ ಹೇಳಿದ್ದಾರೆ. ಅಲ್ಲಿನ ಜನ ಇವರನ್ನು ದಂಗಾಗಿ ನೋಡುತ್ತಿದ್ದರು. ನಂತರ ಅಲ್ಲಿ ಸೇರಿದ್ದ ಮಾಧ್ಯಮಗಳಿಗೆ ಪೋಟೋ ಪೋಸ್ ಕೊಟ್ಟರು. ಇವಿಷ್ಟೇ ಇಲ್ಲ. ಇವುಗಳೂ ಸೇರಿದಂತೆ ನನ್ನ ಕೈಯಲ್ಲಿ 11.2 ಕೆಜಿ ಚಿನ್ನದ ಗಟ್ಟಿ ಮತ್ತು 4.73 ಕೋಟಿ ರೂ.ಗಳ ಚಿನ್ನದ ಆಭರಣವಿದೆ ಎಂದು ಅಫಿಡೆವಿಟ್ನಲ್ಲಿ ಹೇಳಿದ್ದಾರೆ.
ರಾಜ್ಯದ ಎಲ್ಲಾ 234 ವಿಧಾನಸಭಾ ಸ್ಥಾನಗಳು ಏಪ್ರಿಲ್ 6 ರಂದು ಮತ ಚಲಾಯಿಸುತ್ತಿದ್ದು, ಮೇ 2 ರಂದು ಮತ ಎಣಿಕೆ ಆಗಲಿದೆ.
ಈ ಮಧ್ಯೆ, ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಸೋಮವಾರ ಎಡಪಡಿ ವಿಧಾನಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಬಳಿ 47 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಚರಾಸ್ಥಿ ಇರುವುದಾಗಿ ಘೋಷಿಸಿದ್ದಾರೆ. ಸ್ಥಿರ ಆಸ್ತಿ ಇಲ್ಲ ಎಂದು ಹೇಳಿದ್ದಾರೆ. ಉಪಮುಖ್ಯಮಂತ್ರಿ ಒ ಪನ್ನೀರ್‌ಸೆಲ್ವಂ ಅವರು ತಮ್ಮ ಒಟ್ಟು ಆಸ್ತಿಯನ್ನು 61.19 ಲಕ್ಷ ರೂ ಎಂದು ಘೋಷಿಸಿದ್ದಾರೆ.