ಹಾವುಗಳನ್ನು ಓಡಿಸಲು ಮನೆ ಎದುರು ಬೆಂಕಿ ಹಾಕಿದ! ಸುಟ್ಟು ಭಸ್ಮವಾಯ್ತು 13.50 ಕೋಟಿ ರೂಪಾಯಿ ಬಂಗಲೆ!

snake
Published on

ವಾಷಿಂಗ್ಟನ್: ಮನೆಗೆ ಪದೇ ಪದೇ ಹಾವು ಬರುತ್ತದೆ ಎಂದುಕೊಂಡು ರೋಸಿ ಹೋದ ವ್ಯಕ್ತಿಯೊಬ್ಬ ಅದಕ್ಕೆ ಬುದ್ಧಿ ಕಲಿಸಲು ತನ್ನ ಬಂಗಲೆಯ ಹೊರಗೆ ಬೆಂಕಿ ಹಾಕಿ ಇಡೀ ಬಂಗಲೆಯನ್ನೇ ಸುಟ್ಟು ಭಸ್ಮ ಮಾಡಿಕೊಂಡಿರುವ ಘಟನೆ ಅಮೆರಿಕದ ಮೇರಿಲ್ಯಾಂಡ್‍ನಲ್ಲಿ ನಡೆದಿದೆ.

ಹಾವುಗಳಿಗೆ ಬುದ್ಧಿಕಲಿಸಲು ಹೋಗಿ ಸುಮಾರು 1.8 ಮಿಲಿಯನ್‌ (ಸುಮಾರು 13.50 ಕೋಟಿ ರೂಪಾಯಿ) ಬೆಲೆಬಾಳುವ ಬಂಗಲೆ ಜತೆಗೆ ಸಾಮಗ್ರಿಗಳನ್ನು ಕಳೆದುಕೊಂಡಿದ್ದಾನೆ ಈತ.

13.50 ಕೋಟಿ ರೂಪಾಯಿ ಕೊಟ್ಟು ಈ ಆಸಾಮಿ ಬಂಗಲೆ ಖರೀದಿ ಮಾಡಿದ್ದ. ಇಲ್ಲಿ ಆಗಿದ್ದಾಂಗೆ ಹಾವುಗಳು ಬರುತ್ತಿದ್ದರಿಂದ ಈ ಬಂಗಲೆಯನ್ನು ಖರೀದಿ ಮಾಡಲು ಬಹುತೇಕರು ಹಿಂಜರಿದಿದ್ದಾರೆ. ಆದರೆ ಈತ ಮಾತ್ರ ತನಗೆ ಹಾವುಗಳನ್ನು ಓಡಿಸುವುದು ಗೊತ್ತು ಎಂದು ಹೇಳುವ ಮೂಲಕ ಕಡಿಮೆ ಬೆಲೆಗೆ (ಬಂಗಲೆ ಬೆಲೆ 25 ಕೋಟಿ ರೂ.ಗೂ ಅಧಿಕವಿದೆಯಂತೆ) ಖರೀದಿ ಮಾಡಿದ್ದಾನೆ.

ನಂತರ ಹಾವುಗಳು ಕಾಣಿಸಿಕೊಳ್ಳಲು ಶುರುವಾದಾಗ ಒಂದಿಷ್ಟು ಕಲ್ಲಿದ್ದಲು ತಂದು ಅವುಗಳು ಬರುವ ಜಾಗದಲ್ಲಿ ಇಟ್ಟಿದ್ದಾನೆ. ಕಲ್ಲಿದ್ದಲಿನಿಂದ ಬರುವ ಹೊಗೆಗೆ ಹಾವುಗಳು ಹತ್ತಿರ ಸುಳಿಯಲಾರವು ಎಂದು ಪ್ಲ್ಯಾನ್‌ ಮಾಡಿದ್ದ. ಆದರೆ ಬೆಂಕಿ ಗ್ರಹಚಾರಕ್ಕೆ ಮೊದಲು ಪರದೆಗೆ ಹರಡಿ ನಂತರ ಪೀಠೋಪಕರಣಗಳಿಗೆ ವ್ಯಾಪಿಸಿದೆ. 10 ಸಾವಿರ ಚದರ ಅಡಿ ವಿಸ್ತೀರ್ಣದ ಇಡೀ ಬಂಗಲೆ ಸುಟ್ಟು ಕರಕಲಾಗಿದೆ.

ರಕ್ಷಣಾ ಸಿಬ್ಬಂದಿ ಬರುವವೇಳೆಗೆ ಇಡೀ ಮನೆ ಸುಟ್ಟು ಭಸ್ಮವಾಗಿದ್ದು, ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net