ಪ್ರೇಮ ವಿವಾಹವಾದ ಮಗಳು-ಅಳಿಯನನ್ನೇ ಕೊಂದ ಪಾತಕಿಗಳು: ಅಪ್ಪ, ಅಮ್ಮ ಸೇರಿದಂತೆ ಸಹೋದರರಿಗೂ ಗಲ್ಲು ಶಿಕ್ಷೆ

marriage
Published on

ಉರೈನ್​ (ಉತ್ತರ ಪ್ರದೇಶ): ಮಗಳು ಓಡಿಹೋಗಿ ಮದುವೆಯಾದಳು ಎನ್ನುವ ಕಾರಣಕ್ಕೆ ಮಗಳು ಮತ್ತು ಆಕೆಯ ಪತಿಯನ್ನು ಕೊಚ್ಚಿ ಕೊಲೆ ಮಾಡಿದ ಅಪ್ಪ- ಅಮ್ಮ ಸೇರಿದಂತೆ ನಾಲ್ವರಿಗೆ ಗಲ್ಲುಶಿಕ್ಷೆ ವಿಧಿಸಿ ಉತ್ತರ ಪ್ರದೇಶದ ಬದೌನ್​ ಕೋರ್ಟ್​ ಆದೇಶಿಸಿದೆ.

2017ರಲ್ಲಿ ನಡೆದ ಜೋಡಿ ಕೊಲೆ ಪ್ರಕರಣ ಇದಾಗಿದೆ. ಈ ಐವರ ಕುಕೃತ್ಯಕ್ಕೆ ಬಲಿಯಾದವರು ಗೋವಿಂದ್ (24) ಮತ್ತು ಆಶಾ (22).

ಆಗಿದ್ದೇನು? ಉರೈನ ಗ್ರಾಮದ ನಿವಾಸಿ ಪಪ್ಪು ಸಿಂಗ್ ಅವರ ಮಗ ಗೋವಿಂದ್ ಹಾಗೂ ಕಿಶನ್‌ಪಾಲ್ ಅವರ ಪುತ್ರಿ ಆಶಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಈ ಮದುವೆಗೆ ಮನೆಯವರ ಒಪ್ಪಿಗೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಇಬ್ಬರೂ ಉತ್ತರ ಪ್ರದೇಶದಿಂದ ದೆಹಲಿಗೆ ಓಡಿಹೋಗಿ ಮದುವೆಯಾಗಿದ್ದರು.

ಇದು ಆಶಾ ಅವರ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಮಗಳು ಹಾಗೂ ಅಳಿಯನನನ್ನು ಮುಗಿಸುವ ಪ್ಲ್ಯಾನ್​ ಹಾಕಿದ ಅವರು ತಾವೇ ಖುದ್ದು ನಿಂತು ಇಬ್ಬರ ಮದುವೆ ಮಾಡಿಸುವುದಾಗಿ ಹೇಳಿ ಇಬ್ಬರನ್ನೂ ಮನೆಗೆ ಕರೆಸಿಕೊಂಡಿದ್ದರು. ಇದನ್ನು ನಂಬಿ ಆಶಾ ಮತ್ತಿ ಗೋವಿಂದ್​ ವಾಪಸಾಗಿದ್ದರು.

ಆಶಾಳ ತಂದೆ ಕಿಶನ್‌ಪಾಲ್, ತಾಯಿ ಜಲಧಾರ ಹಾಗೂ ಆಶಾಳ ಸಹೋದರರಾದ ವಿಜಯಪಾಲ್ ಮತ್ತು ರಾಮ್‌ವೀರ್‌ ಮೊದಲೇ ಪ್ಲ್ಯಾನ್​ ಮಾಡಿಕೊಂಡಂತೆ ಮೊದಲು ಗೋವಿಂದ್​ನ ತಲೆಗೆ ಹಿಂಬದಿಯಿಂದ ಹೊಡೆದು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದರು. ಇದನ್ನು ನೋಡಿ ತಪ್ಪಿಸಲು ಬಂದ ಮಗಳನ್ನೂ ಅದೇ ಕೊಡಲಿಯಿಂದ ಹೊಡೆದು ಸಾಯಿಸಿದರು. ಈ ಕುರಿತು ಗೋವಿಂದ್ ಅವರ ಪಾಲಕರು ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು.

ಇವರ ಮೇಲಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಂಥ ಬರ್ಬರ ಕೃತ್ಯ ಎಸಗಿದ ಕುಟುಂಬಸ್ಥರಿಗೆ ನ್ಯಾಯಾಧೀಶ ಪಂಕಜ್ ಅಗರವಾಲ್ ಮರಣದಂಡನೆ ವಿಧಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net