ವಂಚನೆ ಕೇಸ್​ನಲ್ಲಿ ಮಾಜಿ ಶಾಸಕ ಜೈಲಲ್ಲಿ​, ಪತ್ನಿಗೆ ಜಾಮೀನು: ಈಗ ಗ್ಯಾಂಗ್​ರೇಪ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಮಗ!

MLA
Published on

ಭದೋಹಿ (ಉತ್ತರ ಪ್ರದೇಶ): ಆಸ್ತಿ ಕಬಳಿಕೆ, ವಂಚನೆ ಮತ್ತು ಕೊಲೆ ಬೆದರಿಕೆ ಇತ್ಯಾದಿ ಕೇಸ್​ನಲ್ಲಿ ಇದಾಗಲೇ ಜೈಲಿನಲ್ಲಿರೊ ಸಮಾಜವಾದಿ ಪಕ್ಷದ ಉಚ್ಛಾಟಿತ ಶಾಸಕ ವಿಜಯ್​ ಮಿಶ್ರಾ ಪುತ್ರ ಈಗ ಸಾಮೂಹಿಕ ಅತ್ಯಾಚಾರ ಮತ್ತು ವಂಚನೆ ಆರೋಪ ಸೇರಿದಂತೆ ಹಲವು ಕೇಸ್​ಗಳಲ್ಲಿ ಸಿಕ್ಕಿಬಿದ್ದಿದ್ದಾನೆ!

ಮಿಶ್ರಾ ಅವರ ಮಗ ವಿಷ್ಣುನನ್ನು ಉತ್ತರ ಪ್ರದೇಶ ವಿಶೇಷ ಪೊಲೀಸ್ ಕಾರ್ಯಪಡೆ ಭಾನುವಾರ ಪುಣೆಯಲ್ಲಿ ಬಂಧಿಸಿದೆ. ಸಾಮೂಹಿಕ ಅತ್ಯಾಚಾರ ಮತ್ತು ವಂಚನೆ ಆರೋಪಗಳ ಮೇಲೆ ಬೇಕಾಗಿದ್ದ ವಿಷ್ಣು, ಪೊಲೀಸರು ತನಗೆ ಬಂಧಿಸುತ್ತಾರೆ ಎಂಬ ಭಯದಲ್ಲಿ ತಲೆ ಮರೆಸಿಕೊಂಡಿದ್ದ. ಈತನನ್ನು ಹುಡುಕಿ ಸುಸ್ತಾಗಿದ್ದ ಪೊಲೀಸರು ಈತನ ಸುಳಿವು ಕೊಟ್ಟವರಿಗೆ 25 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ದರು.

ಆದರೂ ಈತ ಸಿಕ್ಕಿರಲಿಲ್ಲ. ನಂತರ ಬಹುಮಾನದ ಮೊತ್ತವನ್ನು ಒಂದು ಲಕ್ಷ ರೂಪಾಯಿಗೆ ಏರಿಸಲಾಗಿತ್ತು. ಸೆಪ್ಟೆಂಬರ್ 2020 ರಲ್ಲಿ ವಿಷ್ಣು ಮಿಶ್ರಾ ವಿರುದ್ಧ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಲಾಗಿತ್ತು. ಇದೀಗ ಆತ ಸಿಕ್ಕಿಬಿದ್ದಿದ್ದಾನೆ.

ಈ ಬಗ್ಗೆ ಭದೋಹಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ. ಆಸ್ತಿ ಕಬಳಿಕೆ, ವಂಚನೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ವಿಜಯ್​ ಮಿಶ್ರಾ ವಿರುದ್ಧ ಅವರ ಸಂಬಂಧಿ ಕೃಷ್ಣ ಮೋಹನ್ ತಿವಾರಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. 2020ರಲ್ಲಿ ಮಾಜಿ ಶಾಸಕ ವಿಜಯ್ ಮಿಶ್ರಾರನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿತ್ತು. ಸದ್ಯ ಅವರು ಆಗ್ರಾ ಜೈಲಿನಲ್ಲಿದ್ದಾರೆ. ಇವರ ಪತ್ನಿ ರಾಮ್​ ಲಲ್ಲಿಯನ್ನೂ ಬಂಧಿಸಲಾಗಿತ್ತು. ಅವರು ಜಾಮೀನಿನ ಮೇಲೆ ಹೊರ ಇದ್ದಾರೆ. ಆದರೆ ಹಲವಾರು ಕೇಸ್​ನಲ್ಲಿ ಬೇಕಾಗಿರುವ ಮಗನನ್ನು ಈಗ ಬಂಧಿಸಲಾಗಿದೆ. ಇವರು 2020ರ ಆಗಸ್ಟ್​ನಿಂದ ತಲೆಮರೆಸಿಕೊಂಡಿದ್ದರು ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net