

ಫಿರೋಜಾಬಾದ್ (ಉತ್ತರ ಪ್ರದೇಶ): ಪುಟ್ಟ ಕಂದನ ನಿರೀಕ್ಷೆಯಲ್ಲಿದ್ದ ತುಂಬು ಗರ್ಭಿಣಿಯೊಬ್ಬರು, ಅಮ್ಮನ ಮನೆಗೆ ಹೋಗುತ್ತಿದ್ದಾಗ ಭಾರಿ ದುರಂತ ನಡೆದುಹೋಗಿದೆ. ಪತಿಯ ಜತೆ ಬೈಕ್ನಲ್ಲಿ ಹೋಗುವಾಗ ಟ್ರಕ್ ಡಿಕ್ಕಿ ಹೊಡೆದು ಮಹಿಳೆ ನಡುರಸ್ತೆಯಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಆದರೆ ಅದೇ ವೇಳೆ ಮಗುವಿಗೆ ಜನ್ಮ ನೀಡಿದ್ದಾರೆ!
ಉತ್ತರ ಪ್ರದೇಶದ ಫಿರೋಜಾಬಾದ್ನ ನರಖಿ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ತಾರಾ ಗ್ರಾಮದ ಬಳಿ ಈ ಘಟನೆ ನಡೆದಿದೆ. ಆಗ್ರಾ ಜಿಲ್ಲೆಯ ಧನೌಲಾ ಗ್ರಾಮದ ನಿವಾಸಿ ಕಾಮಿನಿ ಈ ದುರಂತ ಸಾವು ಕಂಡವರು.
ತುಂಬು ಗರ್ಭಿಣಿಯಾಗಿದ್ದ ಕಾಮಿನಿ, ಪತಿ ರಾಮು ಜತೆ ಬೈಕ್ನಲ್ಲಿ ತವರಿಗೆ ಹೋಗುತ್ತಿದ್ದರು. ಬರ್ತಾರಾ ಗ್ರಾಮದ ಸಮೀಪ ಎದುರಿಗಿನಿಂದ ಬಂದ್ ಟ್ರಕ್ ಇವರ ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ರಭಸಕ್ಕೆ ಬೈಕ್ ಪಲ್ಟಿಯಾಗಿದೆ. ದಂಪತಿ ಇಬ್ಬರೂ ರಸ್ತೆಯ ಮೇಲೆ ಬಿದ್ದರು. ಆದರೆ ಕಾಮಿನಿ ಅವರು ಬಿದ್ದ ತಕ್ಷಣವೇ, ಹಿಂಬದಿಯಿಂದ ಟ್ರಕ್ ಒಂದು ರಭಸದಿಂದ ಬಂದು ಕಾಮಿನಿಯವರಿಗೆ ಗುದ್ದಿದೆ. ಈ ಆಘಾತದಲ್ಲಿ ಕಾಮಿನಿಯವರಿಗೆ ಪ್ರಸವವಾಗಿದೆ. ಹೆಣ್ಣುಮಗುವಿಗೆ ಜನ್ಮ ನೀಡಿ ಅಲ್ಲಿಯೇ ಮೃತಪಟ್ಟಿದ್ದಾರೆ.
ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದು ಆರೋಗ್ಯವಾಗಿದೆ. ಕಾಮಿನಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಹೆಂಡತಿ ಸಾವಿನಿಂದ ಗಂಡನ ಆಕ್ರಂದನ ಮುಗಿಲು ಮುಟ್ಟಿದೆ. (ಏಜೆನ್ಸೀಸ್)