

ಲಖನೌ: ಪ್ರೇಮವನ್ನು ನಿರಾಕರಿಸಿದ್ದ ಕಾರಣಕ್ಕೆ ಬಾಲಕಿ ಸೇರಿದಂತೆ ಆಕೆಯ ಸ್ನೇಹಿತರಿಗೆ ವಿಷ ಸೇವನೆ ಮಾಡಿಸಿ ಇಬ್ಬರ ಸಾವಿಗೆ ಕಾರಣವಾಗಿರುವ ಆರೋಪ ಹೊತ್ತ ಉತ್ತರ ಪ್ರದೇಶದ ಉನ್ನಾವ್‌ನ ಯುವಕ ವಿನಯ್‌ನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಜಾನುವಾರುಗಳಿಗೆ ಮೇವು ತರಲು ತೆರಳಿದ್ದ ಇಬ್ಬರು ದಲಿತ ಬಾಲಕಿಯರು ನಿಗೂಢವಾಗಿ ಮೃತಪಟ್ಟಿದ್ದರೆ, ಇನ್ನೊಬ್ಬ ಬಾಲಕಿ ಗಂಭೀರ ಸ್ಥಿತಿಯಲ್ಲಿ ಕಂಡುಬಂದಿದ್ದಳು. ಈ ಪ್ರಕರಣ ಅನೇಕ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿತ್ತು. ನಂತರ ಆರೋಪಿ ವಿನಯ್‌ನನ್ನು ಪೊಲೀಸರು ಸತ್ಯವನ್ನು ಬಹಿರಂಗಪಡಿಸಿದ್ದ.
ವಿನಯ್ ಮೃತಪಟ್ಟಿರುವ ಬಾಲಕಿಯ ಪೈಕಿ ಒಬ್ಬಳನ್ನು ಪ್ರೀತಿಸುತ್ತಿದ್ದ. ಲಾಕ್ ಡೌನ್ ವೇಳೆ ಪರಿಚಿತರಾಗಿದ್ದರು, ಪರಿಚಯ ಸ್ನೇಹವಾಗಿ ತಿರುಗಿತ್ತು. ಇಬ್ಬರೂ ಪ್ರತಿನಿತ್ಯ ಊರ ಹೊರಗಿನ ಜಮೀನಿನಲ್ಲಿ ಭೇಟಿಯಾಗುತ್ತಿದ್ದರಂತೆ.
ಹೀಗೆ ಕರೆದಾಗಲೆಲ್ಲಾ ಬರುತ್ತಿದ್ದ ಬಾಲಕಿಗೂ ತನ್ನ ಮೇಲೆ ಪ್ರೀತಿ ಇರುವುದಾಗಿ ಭಾವಿಸಿದ್ದ ಯುವಕ, ಆಕೆಯನ್ನು ಪ್ರೀತಿ ಮಾಡಲು ಶುರು ಮಾಡಿದ್ದ. ಒಂದು ದಿನ ಅವಳು ಭೇಟಿಯಾಗಲು ಬಂದಾಗ ವಿಷಯ ಪ್ರಸ್ತಾಪಿಸಿದ್ದಾನೆ. ಆದರೆ ಆಕೆ ನಿರಾಕರಿಸಿದ್ದಾಳೆ. ಇದರಿಂದ ಯುವಕನಿಗೆ ಸಿಟ್ಟುಬಂದಿದೆಯಂತೆ.
ಮೊನ್ನೆ, ಆ ಬಾಲಕಿ ತನ್ನ ಇನ್ನಿಬ್ಬರು ಸಂಬಂಧಿಕರಾಗಿರುವ ಬಾಲಕಿಯರ ಜತೆ ತೋಟಕ್ಕೆ ಹೋಗಿದ್ದಾಳೆ. ಈ ವೇಳೆ ಭಗ್ನಪ್ರೇಮದಿಂದ ಸಿಟ್ಟಿಗೆದ್ದಿದ್ದ ಯುವಕ, ತನ್ನ ಪ್ರೀತಿ ನಿರಾಕರಿಸಿದ್ದ ಬಾಲಕಿಯ ಕೊಲೆಗೆ ಸಂಚುರೂಪಿಸಿದ್ದ. ಆಕೆಗೆಂದು ಒಂದಿಷ್ಟು ತಿಂಡಿ ತಂದಿದ್ದ, ನೀರು ಕೂಡ ತಂದಿದ್ದ, ಆದರೆ ನೀರಿನಲ್ಲಿ ಕೀಟನಾಶಕ ಬೆರೆಸಿದ್ದ. ಬಾಲಕಿಯ ಜತೆ ಇನ್ನಿಬ್ಬರು ಇದ್ದುದ್ದನ್ನು ಕಂಡ ಆತ ಅವರಿಗೂ ಇದನ್ನು ನೀಡಿದ್ದ. ಕ್ರಿಮಿನಾಶಕ ಇರುವ ನೀರನ್ನು ಕುಡಿದು ಇಬ್ಬರು ಮೃತಪಟ್ಟರೆ, ಒಬ್ಬಾಕೆಯ ಸ್ಥಿತಿ ಗಂಭೀರವಾಗಿದೆ.
ಮುಂದಿನ ವಿಚಾರಣೆಗಾಗಿ ವಿನಯ್‌ನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ಸ್ ಮಾಡಿ