

ಹೈದರಾಬಾದ್: ಕೆಲ ತಿಂಗಳ ಹಿಂದಷ್ಟೇ ಕೋಲಾರದಲ್ಲಿ ಒಬ್ಬನೇ ಒಂದೇ ಮಂಟಪದಲ್ಲಿ ಅಕ್ಕ-ತಂಗಿಯನ್ನು ಮದುವೆಯಾಗಿ ಸುದ್ದಿ ಮಾಡಿದ್ದ. ಅದಕ್ಕೂ ಮೊದಲೇ ಛತ್ತೀಸಗಢದಲ್ಲಿ ಕೂಡ ಇಬ್ಬರಿಗೆ ಒಂದೇ ಮಂಟಪದಲ್ಲಿ ಒಬ್ಬಾತನೇ ತಾಳಿ ಕಟ್ಟಿದ್ದ. ಇದೀಗ ಇಂಥದ್ದೇ ಇನ್ನೊಂದು ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ!
ಈತನ ಹೆಸರು ಅರ್ಜುನ್. ಒಂದು ಕಡೆ ಸುರೇಖಾ, ಇನ್ನೊಂದು ಕಡೆ ಉಷಾರಾಣಿ. ಈ ಮೂವರೂ ಸಂಬಂಧಿಕರು. ಅರ್ಜುನ್‌ನನ್ನು ಕಂಡರೆ ಇಬ್ಬರಿಗೂ ತುಂಬಾ ಇಷ್ಟ. ಅವರಿಬ್ಬರನ್ನೂ ಕಂಡರೆ ಮೊದಲಿನಿಂದಲೂ ಇವನಿಗೂ ಇಷ್ಟ. ಇಬ್ಬರನ್ನೂ ಒಟ್ಟಿಗೇ ಪ್ರೀತಿಸುತ್ತಿದ್ದ ಅರ್ಜುನ್. ತೆಲಂಗಾಣದ ಅದಿಲಾಬಾದ್ ಜಿಲ್ಲಾ ಉಟ್ನೂರು ಮಂಡಲಂ ಮನ್ಸೂರ್ ನಿವಾಸಿಗಳು ಇವರು.
ಈ ಮೂವರ ಪ್ರೇಮ ಕಥನ ಎಷ್ಟರಮಟ್ಟಿಗೆ ಇತ್ತು ಎಂದರೆ ಇಬ್ಬರಿಗೂ ಅವನೇ ಬೇಕಿತ್ತು. ಅವಳು ಇಷ್ಟ ಪಡುವುದು ಇವಳಿಗೆ ಗೊತ್ತಿತ್ತು, ಇವಳು ಇಷ್ಟಪಡುವುದು ಅವಳಿಗೆ ಗೊತ್ತಿತ್ತು. ಆದರೂ ಇಬ್ಬರೂ ಯುವತಿಯರು ಇವನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದರು. ಆದರೆ ಮನೆಯಲ್ಲಿ ಎಲ್ಲರೂ ವಿರೋಧಿಸಿದ್ದರು. ವಿಷಯ ತಿಳಿದ ಕುಟುಂಬಸ್ಥರೂ ವಿರೋಧಿಸಿದ್ದರು. ಆದರೆ ಇದನ್ನು ಕಿವಿಯ ಮೇಲೆ ಇಬ್ಬರೂ ಹಾಕಿಕೊಳ್ಳದೇ ಅವನನ್ನೇ ಮದುವೆಯಾಗುವ ಪಟ್ಟುಹಿಡಿದು ಮದುವೆಯಾಗಿದ್ದಾರೆ.
ಅಂದ ಹಾಗೆ ವರ ಪದವೀಧರ. ಇಬ್ಬರೂ ವಧುಗಳು ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಸಂಬಂಧದಲ್ಲಿ ಭಾವನಾಗಿರುವ ಅರ್ಜುನ್‌ನನ್ನು ನಾಲ್ಕು ವರ್ಷಗಳಿಂದ ಇವರಿಬ್ಬರೂ ಇವನನ್ನು ಲವ್ ಮಾಡ್ತಿದ್ದರು. ಗಿರಿಜನ ಸಂಪ್ರದಾಯದಂತೆ ವಿವಾಹ ಮಹೋತ್ಸವ ನಡೆದಿದೆ.