

ಪಣಜಿ (ಗೋವಾ): ಮಹಾರಾಷ್ಟ್ರ ಸರ್ಕಾರದ ಬಿಕ್ಕಟ್ಟು ಅಂತ್ಯಗೊಂಡು ರೆಬೆಲ್ ಶಾಸಕ ಏಕನಾಥ ಶಿಂಧೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಎರಡು ದಿನಗಳೇ ಕಳೆದಿವೆ. ಇದಕ್ಕೂ ಮೊದಲು ಅಸ್ಸಾಂನ ಗುವಾಹಟಿಯಲ್ಲಿ ಶಿಂಧೆ ನೇತೃತ್ವದ ಬಂಡಾಯ ನಾಯಕರ ಗುಂಪು ಬೀಡು ಬಿಟ್ಟಿತ್ತು. ಅಲ್ಲಿಂದ ಅವರು ಗೋವಾದ ರೆಸಾರ್ಟ್ನಲ್ಲಿ ತಂಗಿದ್ದರು. ಈ ಸಂದರ್ಭದಲ್ಲಿ ತಾವು ಈ ಗುಂಪಿನವರು ಎಂದು ಹೇಳಿಕೊಂಡು ಓರ್ವ ಪುರುಷ ಮತ್ತು ಓರ್ವ ಮಹಿಳೆ ಹೋಟೆಲ್ನಲ್ಲಿ ಉಳಿದುಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಏಕನಾಥ್ ಶಿಂಧೆ ಮತ್ತು ಅವರ ಬಣದ 50 ಶಾಸಕರು ಉಳಿದುಕೊಂಡಿದ್ದ ಗೋವಾದ ಡೊನಾ ಪೌಲಾದ ಸ್ಟಾರ್ ಹೋಟೆಲ್ನಲ್ಲಿ ತಾವು ರಾಜಕೀಯ ಪಕ್ಷಕ್ಕೆ ಸೇರಿದವರು ಎಂದು ಸುಳ್ಳು ಹೇಳಿ ವಾಸ್ತವ್ಯ ಹೂಡಿದ್ದ ಮಹಿಳೆ, ಓರ್ವ ವ್ಯಕ್ತಿಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ರೆಬೆಲ್ ಶಾಸಕರು ಹೋಟೆಲ್ಗೆ ಉಳಿದುಕೊಂಡಿದ್ದ ಸಂದರ್ಭದಲ್ಲಿ ಬಿಗಿ ಭದ್ರತೆ ನೀಡಲಾಗಿತ್ತು. ಸಾರ್ವಜನಿಕರು, ಮಾಧ್ಯಮದವರಿಗೂ ಪ್ರವೇಶ ನಿಷೇಧಿಸಲಾಗಿತ್ತು. ಆದರೆ ಈ ಜೋಡಿ, ತಾವು ರೆಬೆಲ್ ಶಾಸಕರ ಗುಂಪಿಗೆ ಸೇರಿದವರು ಎಂದು ಸುಳ್ಳು ಹೇಳಿ ಹೋಟೆಲ್ನಲ್ಲಿ ಒಂದು ದಿನ ತಂಗಿದ್ದರು. ತಪಾಸಣೆ ನಡೆಸಿದಾಗ ಸುಳ್ಳು ದಾಖಲೆ ನೀಡಿದ್ದು ಗೊತ್ತಾಗಿ ಮಹಿಳೆ ಮತ್ತು ಪುರುಷನನ್ನು ಪೊಲೀಸರು ಬಂಧಿಸಿದ್ದಾರೆ.
ಹೋಟೆಲ್ ಸುತ್ತ ನಿರ್ಬಂಧ ಹೇರಿದಾಗಲೂ ಈ ಜೋಡಿ ಬಂದದ್ದು ಹೇಗೆ ಎಂಬ ಬಗ್ಗೆ ಈಗ ತನಿಖೆ ಶುರುವಾಗಿದೆ. ಅದೂ ಅಲ್ಲದೇ ಒಂದು ದಿನ ಹೋಟೆಲ್ನಲ್ಲಿ ಆರಾಮಾಗಿ ಉಳಿದುಕೊಂಡರೂ ಯಾರ ಗಮನಕ್ಕೆ ಬರಲಿಲ್ಲ ಹೇಗೆ ಎಂಬ ಬಗ್ಗೆ ಪೊಲೀಸರೂ, ಹೋಟೆಲ್ನವರೂ ತಲೆ ಕೆಡಿಸಿಕೊಂಡಿದ್ದಾರೆ. ಬಂಧಿತರ ಹೆಸರು, ಮಾಹಿತಿಯನ್ನು ಪೊಲೀಸರು ಸದ್ಯ ಬಹಿರಂಗಪಡಿಸಿಲ್ಲ. ಶಿಂಧೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಗೋವಾದಲ್ಲಿ ತಂಗಿದ್ದ ಶಿವಸೇನೆ ಬಂಡಾಯ ಶಾಸಕರು ನಿನ್ನೆ ಮಹಾರಾಷ್ಟ್ರಕ್ಕೆ ಮರಳಿದ್ದಾರೆ.