ಅಧಿವೇಶನದ ದಿನವೇ ಸಾವಿರಾರು ಟ್ರ್ಯಾಕ್ಟರ್‌ ಸಂಸತ್ತಿಗೆ ಕೊಂಡೊಯ್ಯಲಿದ್ದೇವೆ ಎಂದ ಟಿಕಾಯತ್‌!

tikait
Published on

ಗಾಜಿಯಾಬಾದ್ ​(ಉತ್ತರ ಪ್ರದೇಶ): ಬಹು ವಿವಾದಕ್ಕೆ ಸಿಲುಕಿದ್ದ ಮೂರು ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿರುವ ಬೆನ್ನಲ್ಲೇ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಹೊಸ ವರಸೆ ಶುರು ಮಾಡಿದ್ದಾರೆ.

ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಶಾಶ್ವತಗೊಳಿಸಲು ಅದಕ್ಕೆ ಶಾಸನೀಯ ಮಾನ್ಯತೆಯನ್ನು ನೀಡಬೇಕೆಂದು ಒತ್ತಾಯಿಸಿ ಇದೇ 29ರಂದು 60 ಟ್ರ್ಯಾಕ್ಟರ್​ಗಳ ಮೆರವಣಿಗೆ ಮಾಡಲಿದ್ದೇವೆ ಎಂದು ಅವರು ಹೇಳಿದ್ದಾರೆ. 29ರಿಂದ ಸಂಸತ್​ನ ಚಳಿಗಾಲದ ಅಧಿವೇಶನ ನಡೆಯಲಿದೆ. ಆ ಸಮಯದಲ್ಲಿ ನಾವು ಪ್ರತಿಭಟನೆ ಮಾಡುತ್ತೇವೆ. ಜತೆಗೆ ಟ್ರ್ಯಾಕ್ಟರ್​ಗಳ ಮೆರವಣಿಗೆಯನ್ನೂ ಮಾಡಲಾಗುತ್ತದೆ. ಈಗಾಗಲೇ ಸ್ವಲ್ಪ ಮಟ್ಟದ ಜಯ ಸಿಕ್ಕಿದೆ. ಅಂದು (ನವೆಂಬರ್ 26ರಂದು) ಭಾಗಶಃ ವಿಜಯದ ದಿನವನ್ನು ಆಚರಣೆ ಮಾಡಲಾಗುತ್ತದೆ. ಉಳಿದ ಬೇಡಿಕೆಗಳನ್ನೂ ಸರ್ಕಾರದ ಮುಂದೆ ಇರಿಸಲಾಗುತ್ತದೆ ಎಂದಿದ್ದಾರೆ.

ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಮಾತನಾಡಿರುವ ಅವರು, ರಸ್ತೆಗಳಲ್ಲಿ ಪ್ರತಿಭಟನೆ ಮಾಡುವುದಿಲ್ಲ. ಪ್ರತಿಭಟನೆ ಮಾಡುತ್ತಿರುವ ಸ್ಥಳಗಳನ್ನು ಕೇಂದ್ರ ಸರ್ಕಾರ ತೆರವುಗೊಳಿಸಿದೆ. ಆ ತೆರವಾಗಿರುವ ಮಾರ್ಗದ ಮೂಲಕವೇ ದೆಹಲಿಗೆ ಸಾಗಿ ಸಂಸತ್ತಿನವರೆಗೆ ಟ್ರ್ಯಾಕ್ಟರ್‌ ಮೆರವಣಿಗೆ ಮಾಡಲಿದ್ದೇವೆ ಎಂದಿದ್ದಾರೆ.

ಕನಿಷ್ಠ ಬೆಂಬಲ ಬೆಲೆಗೆ ಶಾಸನೀಯ ಮಾನ್ಯತೆ ನೀಡುವ ವಿಚಾರವಾಗಿ ಕೇಂದ್ರ ಸರ್ಕಾರ ಯಾವ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಕಳೆದ ಬಾರಿ 200 ರೈತರಷ್ಟೇ ಸಂಸತ್ತಿಗೆ ತೆರಳಿದ್ದೆವು. ಆದರೆ ಈ ಬಾರಿ ಸಾವಿರಾರು ರೈತರು ಹೋಗಲಿದ್ದೇವೆ. ಎಂಎಸ್‌ಪಿ ಅಷ್ಟೇ ಅಲ್ಲದೇ ಕಳೆದ ವರ್ಷ ಮೃತಪಟ್ಟ 750 ಮಂದಿ ರೈತರ ಸಾವಿಗೆ ಹೊಣೆಯನ್ನು ಸರ್ಕಾರವೇ ಹೊರಬೇಕು ಎಂದು ಟಿಕಾಯತ್ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net