ಏಳು ಜಿಲ್ಲೆ ದಾಟಿ ಬಂದ.. 3 ಸಾವಿರ ಕಿ.ಮೀ. ಸುತ್ತಿ ಬಂದ.. ಚೆಲುವ ಹುಲಿರಾಯ...

tiger
Published on

ಮುಂಬೈ: ಚಿತ್ರದಲ್ಲಿ ಕಾಣಿಸುತ್ತಿರುವ ಮಹಾರಾಷ್ಟ್ರದ  ಈ ಹುಲಿರಾಯ ಸಾಧಾರಣನಲ್ಲ. ಇದನ್ನು ನೋಡಿದ ಅರಣ್ಯಾಧಿಕಾರಿಗಳೇ ಅಬ್ಬಬ್ಬಾ ಎಂದು ಬಾಯ್ದೆರೆದಿದ್ದಾರೆ. ಅಂಥ ಸಾಧನೆ ಮಾಡಿರುವ ಅಪರೂಪದ ಹುಲಿ ಇದು. ಭಾರತದ ಯಾವ ಹುಲಿಯೂ ಮಾಡಿರದ ಸಾಧನೆ ಮಾಡಿದೆ ಈ ಹುಲಿ.

ಮೂರೂವರೆ ವರ್ಷದ ಈ ಹುಲಿ ಏನು ಸಾಧನೆ ಮಾಡಿದೆ ಎನ್ನುವ ಮೊದಲು ಈ ಹುಲಿಯ ಹೆಸರು ಹೇಳುವುದಾದರೆ ವಾಕರ್‌. ಈ ಹುಲಿ ಮಾಡಿರುವ ಸಾಧನೆಗೂ ಈ ಹೆಸರಿಗೂ ಸಂಬಂಧವೂ ಇದೆ. ಅದಕ್ಕಾಗಿಯೇ ಅರಣ್ಯಾಧಿಕಾರಿಗಳು ವಾಕರ್ ಎಂದು ಇದಕ್ಕೆ ನಾಮಕರಣ ಮಾಡಿದ್ದಾರೆ.

ಅಂದ ಹಾಗೆ ಈ ಹುಲಿ ಮಾಡಿರುವ ಸಾಧನೆ ಏನು ಗೊತ್ತಾ? 9 ತಿಂಗಳಲ್ಲಿ ಬರೋಬ್ಬರಿ ಮೂರು ಸಾವಿರ ಕಿ.ಮೀ. ಅಡ್ಡಾಡಿ ಬಂದಿದೆ! ಮಹಾರಾಷ್ಟ್ರದ ಏಳು ಜಿಲ್ಲೆಗಳನ್ನು ದಾಟಿ ಪಕ್ಕದ ತೆಲಂಗಾಣದಲ್ಲಿ ಓಡಾಡಿ ಬಂದಿರುವ ಹುಲಿ ಕ್ರಮಿಸಿರುವ ಒಟ್ಟು ದೂರ ಬರೋಬ್ಬರಿ ಮೂರು ಸಾವಿರ ಕಿ.ಮೀ ಎಂದಿದ್ದಾರೆ ಅರಣ್ಯಾಧಿಕಾರಿಗಳು.

2019ರ ಜೂನ್‌ ತಿಂಗಳಿನಲ್ಲಿ ಮಹಾರಾಷ್ಟ್ರದ ಅಭಯಾರಣ್ಯದಿಂದ ಹೊರಟಿದ್ದ ವಾಕರ್‌ 2020ರ ಮಾರ್ಚ್‌ ತಿಂಗಳಿನಲ್ಲಿ ಅಂದರೆ ಒಂಬತ್ತು ತಿಂಗಳು ಬಳಿಕ ಮಹಾರಾಷ್ಟ್ರಕ್ಕೆ ಮರಳಿ ಬಂದಿದೆ. ಈ ಒಂಬತ್ತು ತಿಂಗಳ ಅವಧಿಯಲ್ಲಿ ಇದು ಕ್ರಮಿಸಿರುವ ದೂರ ಮೂರು ಸಾವಿರ ಕಿಲೋಮೀಟರ್‌. ಈ ಹುಲಿಗೆ ಕಾಲರ್ ಐಡಿ ಅಳವಡಿಸಲಾಗಿತ್ತು. ಅದರ ಮೂಲಕ ಹುಲಿಯ ಚಲನವಲನಗಳನ್ನು ಪತ್ತೆ ಹಚ್ಚಲಾಗಿತ್ತು.

ಇಷ್ಟೆಲ್ಲಾ ಸುತ್ತಾಡಿರುವುದಕ್ಕೆ ಅನೇಕ ಕಾರಣಗಳಿವೆ. ಆಹಾರಕ್ಕಾಗಿ, ಸಂಗಾತಿ ಹುಡುಕಲು, ತಾನು ನೆಲೆಸಲು ಜಾಗ ಹುಡುಕಲು... ಹೀಗೆ ಎಲ್ಲವೂ ಸೇರಿ ಇಷ್ಟು ದೂರ ಕ್ರಮಿಸಿರುವುದಾಗಿ ಅರಣ್ಯಾಧಿಕಾರಿಗಳು ಹೇಳುತ್ತಾರೆ. ಇದುವರೆಗೆ ಇಷ್ಟು ದೂರ ಈ ಅವಧಿಯಲ್ಲಿ ಯಾವ ಹುಲಿಯೂ ಕ್ರಮಿಸಿರಲಿಲ್ಲವಂತೆ. ಆದ್ದರಿಂದ ವಾಕರ್‌ ದಾಖಲೆ ಮಾಡಿದೆ.

ಸದ್ಯ 205 ಚ.ಕಿ.ಮೀ ವ್ಯಾಪ್ತಿಯ ಜ್ಞಾನಗಂಗಾ ಅಭಯಾರಣ್ಯದಲ್ಲಿ ನೆಲೆಸಿರುವ ವಾಕರ್ ಈ ಭಾಗದಲ್ಲಿ ನೆಲೆಸಿರುವ ಏಕೈಕ ಹುಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net