

ಅಂಬರನಾಥ್ (ಮಹಾರಾಷ್ಟ್ರ): ಗನ್, ಚೂರಿಗಳನ್ನು ತಂದು ನಿಮ್ಮ ಮುಂದೆ ಹಿಡಿದರೆ ಹೇಗಿರುತ್ತದೆ? ಇದನ್ನು ಕೇಳಿದರೇನೆ ಮೈಯೆಲ್ಲಾ ಝುಂ ಎನ್ನುತ್ತದೆ ಅಲ್ಲವೆ? ಆದರೆ ಶಸ್ತ್ರಸಜ್ಜಿತರಾಗಿ ಬಂದ ಡಕಾಯಿತರನ್ನು ಇಲ್ಲೊಂದು ಯುವಕರ ತಂಡ ಸದೆಬಡಿದು ಹೊಡೆದೋಡಿಸಿ ದಿಟ್ಟತನ ಮೆರೆದಿದೆ.
ಇದು ನಡೆದಿರುವುದು ಮಹಾರಾಷ್ಟ್ರದ ಅಂಬರ್ನಾಥ್ನಲ್ಲಿ. ಇಲ್ಲಿರುವ ಜ್ಯುವೆಲ್ಲರಿ ಅಂಗಡಿಗೆ ಈ ಡಕಾಯಿತರ ಗುಂಪು ಹಾಡ ಹಗಲೇ ನುಗ್ಗಿದೆ. ಮಧ್ಯಾಹ್ನ ಸುಮಾರು 1.30ರ ವೇಳೆ ಡಕಾಯಿತರು ನುಗ್ಗಿದ್ದಾರೆ. ಅವರು ಚಾಕು,ಚೂರಿ ಮಾತ್ರವಲ್ಲದೇ ಗನ್ಗಳನ್ನೂ ತೆಗೆದುಕೊಂಡು ಬಂದಿದ್ದರು.
ಅಂಗಡಿ ಒಳಗೆ ನುಗ್ಗಿದ ಅವರು ಅಲ್ಲಿ ಇದ್ದ ಕೆಲಸಗಾರ 25 ವರ್ಷದ ಭೈರವ್ ಸಿಂಗ್ನನ್ನು ಚೂರಿಯಿಂದ ತಿವಿದಿದ್ದಾರೆ. ಇದೇ ವೇಳೆ ಸಮೀಪವೇ ಇದ್ದ ಯುವಕರು ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಲು ಗನ್, ಚೂರಿಗಳನ್ನೂ ಲೆಕ್ಕಿಸದೇ ಮುನ್ನುಗ್ಗಿದ್ದಾರೆ. ಡಕಾಯಿತರ ಮೇಲೆ ಹಲ್ಲೆ ಮಾಡಿದ್ದಾರೆ. ಇವರು ಈ ರೀತಿ ಮಾಡುತ್ತಿದ್ದಂತೆಯೇ ಕೆಲವು ಸ್ಥಳೀಯರೂ ಸೇರಿಕೊಂಡಿದ್ದಾರೆ.
ಈ ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿವೆ. ಜನರನ್ನು ಕಂಡು ದರೋಡೆಕೋರರು ಓಡಿ ಹೋಗಿದ್ದಾರೆ. ಆದರೆ ಹೋಗುವ ಮುನ್ನ ತಾವು ತಂದಿದ್ದ ಗನ್ನಿಂದ ಶೂಟ್ ಮಾಡಿದ್ದಾರೆ. ಇದರಿಂದಾಗಿ ಇಬ್ಬರು ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭೈರವ್ ಸಿಂಗ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.