ಕೋಮುವಾದಿ ಪಕ್ಷದಲ್ಲಿ ಇರಲಾರೆವು: ಮೆಹಬೂಬಾ ಮುಫ್ತಿಗೆ ಮತ್ತೊಮ್ಮೆ ಆಘಾತ

mufthi
Published on

ಶ್ರೀನಗರ: ಜಮ್ಮು- ಕಾಶ್ಮೀರದ ಪೀಪಲ್​ ಡೆಮಾಕ್ರಟಿಕ್​ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿಗೆ ಮೇಲಿಂದ ಮೇಲೆ ಶಾಕ್​ ಉಂಟಾಗುತ್ತಲೇ ಸಾಗಿದೆ.

ಪಿಡಿಪಿಯ ಮೂವರು ಸಂಸ್ಥಾಪಕ ಸದಸ್ಯರಾಗಿರುವ, ರಾಜ್ಯಸಭೆಯ ಮಾಜಿ ಸಂಸದ ಟಿ.ಎಸ್. ಬಜ್ವಾ, ಹಿರಿಯ ನಾಯಕರಾದ ಟಿ ಎಸ್ ಬಜ್ವಾ, ಹಸನ್ ಅಲಿ ವಾಫಾ, ಮತ್ತು ಬೆಡ್ ಮಹಾಜನ್ ಅವರು ಅಕ್ಟೋಬರ್ 26 ರಂದು ಪಿಡಿಪಿಗೆ ರಾಜೀನಾಮೆ ನೀಡಿದ್ದರು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸುವವರೆಗೆ ತ್ರಿವರ್ಣವನ್ನು ಹಿಡಿಯದಿರುವ ಬಗ್ಗೆ ಮೆಹಬೂಬಾ ಹೇಳಿಕೆಯಿಂದ ಈ ಮೂವರು ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ಸಲ್ಲಿಸಿದ್ದರು.

ಅದರ ಬೆನ್ನಲ್ಲೇ ನಿನ್ನೆಯಷ್ಟೇ ಇವರ ನಿಕಟವರ್ತಿ, ಆಪ್ತ ಸಹಾಯಕ ವಹೀದ್ ಪರ್ರಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿತ್ತು. ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ನವೀದ್ ಬಾಬು ಒಳಗೊಂಡ ಭಯೋತ್ಪಾದಕ ಪ್ರಕರಣಗಳಲ್ಲಿ ಸಂಬಂಧ ಹೊಂದಿದ್ದಕ್ಕಾಗಿ ಈತನನ್ನು ಬಂಧಿಸಲಾಗಿತ್ತು.

ಇದೀಗ ಮತ್ತೊಂದು ಶಾಕ್​ ಎದುರಿಸಬೇಕಾಗಿ ಬಂದಿದೆ ಈ ನಾಯಕಿಗೆ. ಅದೇನೆಂದರೆ ಪಿಡಿಪಿಯ ಮೂರು ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಧಮನ್ ಭಾಸಿನ್, ಫಲ್ಲೈಲ್ ಸಿಂಗ್ ಮತ್ತು ಪ್ರೀತಮ್ ಕೊತ್ವಾಲ್ ಅವರು ಪಕ್ಷದಿಂದ ಹೊರನಡೆದಿದ್ದಾರೆ.

ಕೋಮುವಾದಿ ಅಂಶಗಳು ಪಕ್ಷವನ್ನು ಆವರಿಸಿಕೊಂಡಿದೆ. ಅಂತಹ ಪರಿಸ್ಥಿತಿಯಲ್ಲಿ, ಪಕ್ಷವನ್ನು ತೊರೆಯುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆಗಳಿಲ್ಲ. ನಿರ್ಲಜ್ಜ ಹಾಗೂ ಕೋಮುವಾದಿ ಇರುವಲ್ಲಿ ಇರಲು ಸಾಧ್ಯವಿಲ್ಲ. ಇಂಥ ಪಕ್ಷವನ್ನು ತೊರೆಯುತ್ತಿದ್ದೇವೆ ಎಂದು ಮೂವರೂ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಪಕ್ಷವನ್ನು ಒಂದು ಉದ್ದೇಶದಿಂದಾಗಿ ನಾವು ಸೇರ್ಪಡೆಯಾಗಿದ್ದೆವು. ಆದರೆ ಪಕ್ಷದ ಮೂಲ ಸಿದ್ಧಾಂತವನ್ನು ಬದಿಗಿಟ್ಟು ವಿವಾದಾತ್ಮಕ ಹಾಗೂ ಪ್ರಚೋದನಕಾರಿಯಾಗುವಂಥ ಹೇಳಿಕೆಗಳನ್ನು ನೀಡುತ್ತಾ ಸಾಗುವ ಮೂಲಕ ತನ್ನ ಧ್ಯೇಯೋದ್ದೇಶವನ್ನು ಮರೆತಿದೆ. ಇಂಥ ಪಕ್ಷದಲ್ಲಿ ನಾವು ಇರಲು ಸಾಧ್ಯವಿಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net