

ನ್ಯೂಯಾರ್ಕ್: ಮೈಯೆಲ್ಲಾ ಕಪ್ಪುಬಣ್ಣ ಹೊಂದಿರುವ ಕೃಷ್ಣ ಸುಂದರಿಯ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅತೀಯಾದ ಕಪ್ಪು ಬಣ್ಣ ಹೊಂದಿದ ಆಫ್ರಿಕನ್ ಪ್ರಜೆಯಾಗಿರುವ ಈ ಮಹಿಳೆ ಗಿನ್ನೆಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸೇರ್ಪಡೆಯಾಗಿದ್ದಾಳೆ. ವಿಶ್ವದ ಅತ್ಯಂತ ಕಪ್ಪಗಿರುವ ಮಹಿಳೆ ಎಂದು ಈಕೆಯನ್ನು ಗುರುತಿಸಲಾಗಿದೆ ಎಂದು ಎಲ್ಲೆಡೆ ಹರಿದಾಡುತ್ತಿದೆ.
ವರ್ಣಭೇದದ ಕುರಿತು ನಡೆಯುತ್ತಿರುವ ಚರ್ಚೆಯ ನಡುವೆಯೇ ಗಿನ್ನೆಸ್ ಬುಕ್ ಕೂಡ ಕಪ್ಪು, ಬಿಳುಪು ವರ್ಣಭೇದ ಮಾಡಲು ಶುರು ಮಾಡಿತೇ ಎಂದು ಅನೇಕ ಮಂದಿ ಕಿಡಿ ಕಾರುತ್ತಿದ್ದರೆ, ಕಪ್ಪಗಿರುವ ಈಕೆ ತುಂಬಾ ಸುಂದರವಾಗಿದ್ದರೂ ಈ ರೀತಿ ವರ್ಣಗಳ ಮೂಲಕ ಮನುಷ್ಯರನ್ನು ಅಳೆಯುವುದು ಸರಿಯಲ್ಲ ಎಂಬುದಾಗಿಯೂ ಹೇಳಲಾಗುತ್ತಿದೆ.
ಈಕೆಯ ಹೆಸರು ನ್ಯಾಕೀಮ್ ಗಟ್ವೇಚ್ ಎಂದು ಗಿನ್ನೆಸ್ ಬುಕ್‌ನಲ್ಲಿ ಸೇರ್ಪಡೆಯಾಗಿರುವುದಾಗಿ ವರದಿಯಾಗುತ್ತಲೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಗಿನ್ನೆಸ್ ರೆಕಾರ್ಡ್ ಸಂಸ್ಥೆ, ಈ ಮಾಹಿತಿ ಸುಳ್ಳು ಎಂದು ಸ್ಪಷ್ಟಪಡಿಸಿದೆ.
ಈಕೆ ನ್ಯಾಕೀಮ್ ಗಟ್ವೇಚ್ ಕೂಡ ಅಲ್ಲ, ಮಾತ್ರವಲ್ಲದೇ ಗಿನ್ನೆಸ್ ರಿಕಾರ್ಡ್‌ನಲ್ಲಿ ವರ್ಣಭೇದ ಮಾಡುತ್ತಿಲ್ಲ. ಚರ್ಮದ ಬಣ್ಣವನ್ನು ಆಧರಿಸಿ ದಾಖಲೆಯನ್ನು ನಾವು ಪರಿಗಣಿಸುವುದಿಲ್ಲ, ಅದನ್ನು ಯಾರೂ ನಂಬಬಾರದು ಎಂದು ಸ್ಪಷ್ಪಪಡಿಸಿದೆ.
ಈಕೆ ಯಾರೆಂದು ತಿಳಿದಿಲ್ಲ. ಆದರೆ ಆಫ್ರಿಕಾದಲ್ಲಿ ಕೂಡ ಈಕೆಯ ಫೋಟೋ ಸಕತ್ ವೈರಲ್ ಆಗಿದ್ದು, ಅಲ್ಲಿ ಕೂಡ ತುಂಬಾ ಚರ್ಚೆಗೆ ಗ್ರಾಸವಾಗಿದೆ ಈ ವಿಷಯ. ಇದಕ್ಕೆ ಕಾರಣ ಈಕೆಯನ್ನು 'ಕತ್ತಲೆಯ ರಾಣಿ' (‘Queen of Darkness) ಎಂದು ಗಿನ್ನೆಸ್ ದಾಖಲೆಯಲ್ಲಿ ಹೆಸರಿಸಲಾಗಿದೆ ಎಂದು ಪೋಸ್ಟ್ ಮಾಡಲಾಗಿದೆ. ಈ ರೀತಿ ಮಹಿಳೆಯೊಬ್ಬಳನ್ನು ಆಕೆಯ ಬಣ್ಣದ ಆಧಾರದ ಮೇಲೆ ಕತ್ತಲೆ, ಬೆಳಕು ಎಂದೆಲ್ಲಾ ಗುರುತಿಸುವುದು ದೊಡ್ಡ ತಪ್ಪು ಎಂದು ಆಫ್ರಿಕಾದಲ್ಲಿ ಕೂಡ ಅಭಿಯಾನವೇ ಶುರುವಾಗಿದೆ. ಸದ್ಯ ಗಿನ್ನೆಸ್ ಸಂಸ್ಥೆ ವಕ್ತಾರರು ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಇವೆಲ್ಲಾ ಮಾಹಿತಿ ಸುಳ್ಳು ಎಂದಿದ್ದಾರೆ.