ಈತ ದೇವಾಲಯ ಮಾರಿದ, ಆತ ಖರೀದಿಸಿ ಹಿಂದೂಗಳನ್ನು ಓಡಿಸಿದ! 40 ವರ್ಷಗಳ ಹಿಂದಿನ ಕೇಸ್‌ಗೆ ಮರುಜೀವ...

ram
Published on

ಬಂಗಾರಪೇಟೆ (ಉತ್ತರಪ್ರದೇಶ): ಪಾಕಿಸ್ತಾನದ ಪ್ರಜೆಯೊಬ್ಬ ಹಿಂದೂ ದೇವಸ್ಥಾನದ ಆಸ್ತಿಯನ್ನು ಮಾರಾಟಕ್ಕಿಟ್ಟಿರುವ ಘಟನೆ ಉತ್ತರ ಪ್ರದೇಶದ ಬಂಗಾರಪೇಟೆ ಬೇಕಂಗಂಜ್‌ನಲ್ಲಿ ನಡೆದಿದೆ. 40 ವರ್ಷಗಳ ಬಳಿಕ ಈ ಘಟನೆಗೆ ಮರುಜೀವ ಸಿಕ್ಕಿದ್ದು, ಆರೋಪಿಗಳಿಗೆ ಉತ್ತರ ಪ್ರದೇಶದ ಕಾನ್ಪುರದ ಜಿಲ್ಲಾಡಳಿತದಿಂದ ನೋಟಿಸ್‌ ಜಾರಿಗೊಳಿಸಲಾಗಿದೆ.

ಇಲ್ಲಿಯ ರಾಮ ಜಾನಕಿ ದೇವಸ್ಥಾನ ಸೇರಿದಂತೆ ಹಿಂದೂಗಳಿಗೆ ಸೇರಿದ ಕೆಲ ಆಸ್ತಿಗಳನ್ನು ಮಾರಾಟ ಮಾಡಿರುವುದನ್ನು ಕಾನ್ಪುರ ಆಡಳಿತದ ಗಮನಕ್ಕೆ ಬಂದಿದೆ. ಪಾಕಿಸ್ತಾನಿ ಪ್ರಜೆಯಾದ ಅಬಿದ್ ರೆಹಮಾನ್ ಎಂಬಾತ ಈ ಆಸ್ತಿಯನ್ನು ಮಾರಾಟ ಮಾಡಿ ಅದನ್ನು ಕಾನ್ಪುರದ ಮುಖ್ತಾರ್ ಬಾಬಾಗೆ ಮಾರಾಟ ಮಾಡಿರುವ ಆರೋಪ ಹೊತ್ತ ಘಟನೆಯಿದು.

ಈ ಘಟನೆ ನಡೆದಿರುವುದು 1982 ರಲ್ಲಿ. ಈಗ ವಿಷಯ ಬಹಿರಂಗಗೊಂಡಿದೆ. ‘ಎನಿಮಿ ಪ್ರಾಪರ್ಟಿ ಕಸ್ಟೋಡಿಯನ್’ ಕಚೇರಿಯು ಈಗ ದೇವಸ್ಥಾನ ಮತ್ತು ಇತರ ಆಸ್ತಿಗಳನ್ನು ಶತ್ರು ಆಸ್ತಿಯನ್ನಾಗಿ ಸೇರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು ಖರೀದಿದಾರ ಮುಕ್ತಾರ್ ಬಾಬಾಗೆ ನೋಟಿಸ್ ಜಾರಿಗೊಳಿಸಲಾಗಿದೆ.

ಘಟನೆಯ ವಿವರ
ಮುಖ್ತಾರ್ ಬಾಬಾ ದೇವಸ್ಥಾನದ ಆವರಣದಲ್ಲಿ ಸೈಕಲ್ ರಿಪೇರಿ ಅಂಗಡಿ ಇಟ್ಟುಕೊಂಡು ಜೀವನ ನಿರ್ವಹಿಸುತ್ತಿದ್ದ. 1962ರಲ್ಲಿ ಪಾಕಿಸ್ತಾನಕ್ಕೆ ಹೋಗಿ ನೆಲೆಸಿದ್ದ ಅಬಿದ್‌ ರೆಹಮಾನ್‌ 1982ರಲ್ಲಿ ವಾಪಸ್‌ ಬಂದಿದ್ದಾನೆ. ಆ ಸಮಯದಲ್ಲಿ ದೇವಸ್ಥಾನ ಮತ್ತು ಅದಕ್ಕೆ ಸೇರಿರುವ ಆಸ್ತಿಯನ್ನು ಮುಖ್ತಾರ್​ ಬಾಬಾಗೆ ಮಾರಾಟ ಮಾಡಿದ್ದಾನೆ.

ಇಲ್ಲಿಂದ ಶುರುವಾಗಿದೆ ಇವರ ಆಟ. ದೇವಸ್ಥಾನದ ಆಸ್ತಿ ತನ್ನ ಕೈವಶವಾಗುತ್ತಲೇ ಅಲ್ಲಿ ವಾಸಿಸುತ್ತಿದ್ದ 18 ಹಿಂದೂ ಕುಟುಂಬಗಳನ್ನು ಓಡಿಸಿ, ಹೋಟೆಲ್ ನಿರ್ಮಿಸಿದ್ದಾನೆ ಎನ್ನಲಾಗಿದೆ. ಈ ಭೂಮಿ ಇದುವರೆಗೆ ಕೂಡ ಕಾನ್ಪುರ ಮುನ್ಸಿಪಲ್ ಕಾರ್ಪೊರೇಶನ್‌ನ ದಾಖಲೆಗಳಲ್ಲಿ ದೇವಾಲಯ ಎಂದು ನಮೂದಿಸಿರುವುದನ್ನು ನೋಡಬಹುದು.

ಶತ್ರು ಆಸ್ತಿ ಸಂರಕ್ಷಣಾ ಸಮಿತಿಯಿಂದ ದೂರು ದಾಖಲಾದ ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆಗೆ ಸೂಚಿಸಿದ್ದರು. ಇದೀಗ ಅದರ ವರದಿ ಬಂದಿದ್ದು, ಕುತಂತ್ರ ಬೆಳಕಿಗೆ ಬಂದಿದೆ. ದೇವಾಲಯವನ್ನು ಖರೀದಿಸಿ ಕೆಡವಿದವರಿಗೂ ನೋಟಿಸ್ ಜಾರಿ ಮಾಡಲಾಗಿದೆ ಎಂದು ಶತ್ರು ಆಸ್ತಿ ಸಂರಕ್ಷಣಾಧಿಕಾರಿ ಕಚೇರಿಯ ಮುಖ್ಯ ಮೇಲ್ವಿಚಾರಕ ಮತ್ತು ಸಲಹೆಗಾರ ಕರ್ನಲ್ ಸಂಜಯ್ ಸಹಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net