

ನವದೆಹಲಿ: ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಮಣಿಪುರ ಮತ್ತು ಗೋವಾ ಈ ಪಂಚರಾಜ್ಯಗಳ ಫಲಿತಾಂಶಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ಅತ್ತ ಮತ ಎಣಿಕೆ ನಡೆಯುತ್ತಿದ್ದರೆ ಇತ್ತ ಹಲವಾರು ರಾಜಕೀಯ ಧುರೀಣರು ದೇವಾಲಯಗಳಿಗೆ ದೌಡಾಯಿಸಿದ್ದಾರೆ. ದೇವರೇ ನಮ್ಮನ್ನು ಗೆಲ್ಲಿಸು ಎಂದು ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ.
ಮಣಿಪುರದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಇಂಫಾಲ್‍ನ ಶ್ರೀಗೋವಿಂದಜೀ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರೆ, ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಚಮ್ಕೌರ್ ಸಾಹಿಬ್ ಗುರುದ್ವಾರದಲ್ಲಿ ತಮ್ಮ ಕುಟುಂಬದೊಂದಿಗೆ ಪ್ರಾರ್ಥನೆ ನೆರವೇರಿಸುತ್ತಿದ್ದಾರೆ.
ಇತ್ತ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶ್ರೀದತ್ತ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿರುವುದು ಕಂಡ ಬಂತು. ಉತ್ತರ ಪ್ರದೇಶದ ಲಖನೌದಲ್ಲಿ ಬಿಜೆಪಿ ನಾಯಕ ರಾಜೇಶ್ವರ್ ಸಿಂಗ್ ಚಂದ್ರಿಕಾ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪಂಜಾಬ್‍ನ ಆಪ್ ನಾಯಕ ಭಗವಂತ್ ಮಾನ್ ಗುರುದ್ವಾರ ಗುರುಸಾಗರ್ ಮಸ್ತುವಾನಾ ಸಾಹಿಬ್ ದೇವಸ್ಥಾನ ಸಂಗ್ರೂರ್‌ನಲ್ಲಿ ಪ್ರಾರ್ಥನೆ ಸಲ್ಲಿಕೆ ಮಾಡಿ ಬಂದಿದ್ದಾರೆ. ಒಟ್ಟಿನಲ್ಲಿ ದೇವರು ಯಾರಿಗೆ ಒಲಿಯಲಿದ್ದಾರೆ ಎಂಬುದು ಸದ್ಯದಲ್ಲಿಯೇ ತಿಳಿದು ಬರಲಿದೆ.