ಟೆಲಿಕಾಂ ಸಂಸ್ಥೆಗಳಿಂದ ಸಾವಿರಾರು ಕೋಟಿ ಶುಲ್ಕ ಬಾಕಿ : ಸುಪ್ರೀಂನಿಂದ 10 ವರ್ಷ ಗಡುವು

telecom
Published on

ನವದೆಹಲಿ: ಟೆಲಿಕಾಂ ಸಂಸ್ಥೆಗಳು ಸರ್ಕಾರಕ್ಕೆ ಪಾವತಿಸಬೇಕಿರುವ ಎಜಿಆರ್‌ (ಹೊಂದಾಣಿಕೆಯ ಒಟ್ಟು ಆದಾಯ) ಪಾವತಿಗೆ 10 ವರ್ಷಗಳ ಕಾಲಾವಕಾಶವನ್ನು ಸುಪ್ರೀಂಕೋರ್ಟ್‌ ನೀಡಿದೆ.

ಈ ಹಿನ್ನೆಲೆಯಲ್ಲಿ ಕೋಟ್ಯಂತರ ರೂಪಾಯಿಗಳ ಎಜಿಆರ್ ಬಾಕಿ ಉಳಿಸಿಕೊಂಡಿರುವ ಟೆಲಿಕಾಂ ಸಂಸ್ಥೆಗಳು ಸದ್ಯ ನಿರಾಳವಾಗಿವೆ.

ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ ( ಒಟ್ಟು ಹೊಂದಾಣಿಕೆ ಆದಾಯ) ಇದನ್ನು ಹೇಗೆ ನಿರ್ಧರಿಸಬೇಕೆಂಬ ಗೊಂದಲ ದಶಕಗಳಿಂದಲೂ ದೊಡ್ಡ ತಲೆನೋವಾಗಿಯೇ ಇದೆ. ತಾನು ಪಡೆದಿರುವ ಒಟ್ಟಾರೆ ಆದಾಯದ ಇಂತಿಷ್ಟು ಭಾಗವನ್ನು ಸರ್ಕಾರಕ್ಕೆ ಪಾವತಿಸಬೇಕು ಎನ್ನುವುದು ನಿಯಮ.

ಟೆಲಿಕಾಂಯೇತರ ಆದಾಯ ಮತ್ತು ಮುಖ್ಯ ಭಾಗದ ಆದಾಯಗಳನ್ನು ಇದರ ವ್ಯಾಪ್ತಿಗೆ ತರುವುದಕ್ಕೆ ಟೆಲಿಕಾಂ ಸಂಸ್ಥೆಗಳ ವಿರೋಧವಿದೆ. ಆದರೆ ಟರ್ಮಿನೇಷನ್ ಫೀ (ಕರೆ ಕಡಿತ ಶುಲ್ಕ) ಮತ್ತು ರೋಮಿಂಗ್ ಶುಲ್ಕ ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ಆದಾಯವೂ ಎಜಿಆರ್ ವ್ಯಾಪ್ತಿಗೆ ಬರಬೇಕು ಎಂಬುದು ದೂರ ಸಂಪರ್ಕ ಇಲಾಖೆಯ ವಾದವಾಗಿತ್ತು.

ಈ ಪ್ರಕರಣ ಸುಪ್ರೀಂಕೋರ್ಟ್‌ಗೆ ಹೋಗಿತ್ತು. ಈಗ ದೂರಸಂಪರ್ಕ ಇಲಾಖೆಯ ಪರವಾಗಿ ತೀರ್ಪು ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಟೆಲಿಕಾಂ ಸಂಸ್ಥೆಗಳು ಈ ಶುಲ್ಕವನ್ನು ಕಟ್ಟಲೇಬೇಕಾದ ಅನಿವಾರ್ಯತೆ ಉಂಟಾಗಿದೆ. ಆದರೆ ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡಿದ್ದರಿಂದ ತಮಗೆ ಅವಕಾಶ ನೀಡಿ ಎಂದು ಈ ಸಂಸ್ಥೆಗಳು ಗೋಗರೆದ ಹಿನ್ನೆಲೆಯಲ್ಲಿ 10 ವರ್ಷಗಳ ಗಡುವನ್ನು ಕೋರ್ಟ್‌ ನೀಡಿದೆ.

ಪ್ರಸಿದ್ಧ ಟೆಲಿಕಾಂ ಸಂಸ್ಥೆಗಳು ಬಾಕಿ ಉಳಿಸಿಕೊಂಡಿರುವ ಎಜಿಆರ್‌ಗಳ ಬಗ್ಗೆ ಹೇಳುವುದಾದರೆ: ವೊಡಾಫೋನ್‌ ಐಡಿಯಾ 58,254 ಕೋಟಿ ರೂ, ಏರ್‌ಟೆಲ್‌ 43,980 ಕೋಟಿ ರೂ., ಟಾಟಾ 16,788 ಕೋಟಿ ರೂ. ಬಾಕಿ ನೀಡಬೇಕಾಗಿದೆ. ವೊಡಾಫೋನ್‌ ಐಡಿಯಾ ಇತ್ತೀಚೆಗೆ 1,000 ಕೋಟಿ ರೂ. ಬಾಕಿ ಪಾವತಿಸಿತ್ತು. ಅದು ಒಟ್ಟು ಇಲ್ಲಿಯವರೆಗೆ 6,854 ಕೋಟಿ ರೂ. ನೀಡಿದ್ದರೆ, ಏರ್‌ಟೆಲ್‌ 18,004 ಕೋಟಿ ರೂ. ಮತ್ತು ಟಾಟಾ 4,197 ಕೋಟಿ ರೂ. ಪಾವತಿ ಮಾಡಿವೆ. ಇದೇ ರೀತಿ ರಿಲಯನ್ಸ್‌ ಜಿಯೋ, ಬಿಎಸ್‌ಎನ್‌ಎಲ್‌-ಎಂಟಿಎನ್‌ಎಲ್‌ ಕೂಡ ಸಾವಿರಾರು ಕೋಟಿ ಎಆರ್‌ಜಿ ಬಾಕಿ ಉಳಿಸಿಕೊಂಡಿವೆ.

2031 ಮಾರ್ಚ್​ ಒಳಗೆ ಈ ಬಾಕಿ ಹಣವನ್ನು ಕಟ್ಟುವಂತೆ ಕೋರ್ಟ‌ ಆದೇಶಿಸಿದೆ. ಜತೆಗೆ, ಮಾರ್ಚ್​ 31ರ ಒಳಗೆ ಶೇ.10 ಬಾಕಿ ಹಣವನ್ನು ಹಿಂದಿರುಗಿಸಲು ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net