ಪ್ಲೀಸ್‌ ಟ್ರಾನ್ಸ್‌ಫರ್‌ ಮಾಡಬೇಡಿ, ಮನೆ ಸ್ಥಿತಿ ಸರಿಯಿಲ್ಲ ಎಂದರೂ ಮುಖ್ಯ ಶಿಕ್ಷಕನ ವರ್ಗ: ಹೃದಯಾಘಾತದಿಂದ ಸಾವು!

teacher
Published on

ಮಹಬೂಬಾಬಾದ್ (ತೆಲಂಗಾಣ): ಬೇರೆ ಜಿಲ್ಲೆಗೆ ತಮ್ಮನ್ನು ವರ್ಗಾವಣೆ ಮಾಡಿರುವ ವಿಷಯ ಕೇಳುತ್ತಿದ್ದಂತೆಯೇ ಶಿಕ್ಷಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಬಾನೋತ್ ಜೆತ್ರಾ ಮೃತಪಟ್ಟವರು. ಇವರಿಗೆ 57 ವರ್ಷ ವಯಸ್ಸಾಗಿತ್ತು. ಇವರು ಮೆಹಬೂಬಾಬಾದ್‌ ಜಿಲ್ಲೆಯ ನೆಲ್ಲಿಕೂದುರು ಮಂಡಲದ ಚಿನ್ನ ಮುಪ್ಪರಂ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಇವರನ್ನು ಮುಲುಗು ಜಿಲ್ಲೆಯ ಶಾಲೆಗೆ ವರ್ಗಾವಣೆ ಮಾಡಲಾಗಿತ್ತು.

ವರ್ಗಾವಣೆ ಮಾಡಿರುವ ವಿಷಯ ತಿಳಿದಂದಿನಿಂದಲೂ ಇವರು ಮಂಕಾಗಿದ್ದರು. ಪ್ರತಿದಿನ ದೂರದ ಊರಿಗೆ ಹೋಗುವುದು ಹೇಗೆ ಎಂದು ಸಹೋದ್ಯೋಗಿಗಳ ಜತೆಗೆ ಚರ್ಚಿಸುತ್ತಿದ್ದರು. ಇದೇ ಕೊರಗಿನಲ್ಲಿದ್ದ ಅವರಿಗೆ ಹೃದಯಾಘಾತವಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಹೃದಯಾಘಾತವಾಗಿದ್ದರಿಂದ ಈ ವಿಷಯ ಮನೆಯವರಿಗೆ ತಿಳಿದದ್ದು ವಿಳಂಬವಾಗಿ.

ಮನೆಯವರು ಬರುವಷ್ಟರಲ್ಲಿಯೇ ಬಾನೋತ್ ಜೆತ್ರಾ ಕೋಮಾಕ್ಕೆ ಹೋಗಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು.

ಇವರ ಪತ್ನಿ ಕೂಡ ಶಿಕ್ಷಕಿಯಾಗಿದ್ದು, ಇಬ್ಬರಿಗೂ ಒಂದೇ ಕಡೆ ವರ್ಗ ಮಾಡಿ ಎಂದು ಕೋರಿಕೊಂಡಿದ್ದರು. ಆದರೆ ಅವರ ಮನವಿ ಮಾನ್ಯವಾಗಿರಲಿಲ್ಲ. ಅಷ್ಟೇ ಅಲ್ಲದೇ ಇವರ ಮಗ ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದುದರಿಂದ ದೂರದ ಊರಿಗೆ ಹೋಗುವುದು ಬಹಳ ಕಷ್ಟವಾಗಿತ್ತು. ಎಷ್ಟು ಬೇಡಿಕೊಂಡರೂ ಶಿಕ್ಷಣ ಇಲಾಖೆ ಇದನ್ನು ಪರಿಗಣಿಸಿರಲಿಲ್ಲ. ಸುಮಾರು 30 ವರ್ಷಗಳ ಕಾಲ ಒಂದೇ ಜಿಲ್ಲೆಯಲ್ಲಿಯೇ ಸೇವೆ ಸಲ್ಲಿಸಿದ್ದರು. ಈಗ ಏಕಾಏಕಿಯಾಗಿ ಜಿಲ್ಲೆಯನ್ನು, ತಮ್ಮ ಕುಟುಂಬದವರನ್ನು ಬಿಟ್ಟು ಹೋಗುವ ಸಂಕಷ್ಟದಿಂದ ಹೃದಯಾಘಾತವಾಗಿದೆ. ಇದಕ್ಕೆ ಶಿಕ್ಷಣ ಇಲಾಖೆಯೇ ನೇರ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net