

ತಂಜಾವೂರು: ಅತ್ತ ಅಮೆರಿಕದಲ್ಲಿ ಚುನಾವಣಾ ಫಲಿತಾಂಶ ಹೊರಬರುತ್ತಿದ್ದಂತೆಯೇ, ಇತ್ತ ತಮಿಳುನಾಡಿನ ತಿರುವರೂರು ಜಿಲ್ಲೆಯ ತುಳಸೇಂದ್ರಪುರಂ ಪೈಂಗನಾಡು ಗ್ರಾಮದಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೀಪಾವಳಿ ಹಬ್ಬದ ವಾರದ ಮೊದಲೇ ಇಲ್ಲಿ ಸಡಗರವೋ ಸಡಗರ!
ಅಷ್ಟಕ್ಕೂ ಅಮೆರಿಕ ಚುನಾವಣೆಯಗೂ, ಇಲ್ಲಿಯ ಸಂಭ್ರಮಕ್ಕೂ ಕಾರಣವಿದೆ. ಅದೇನೆಂದರೆ ಕಮಲಾ ಹ್ಯಾರಿಸ್.
ಕಮಲಾ ಹ್ಯಾರಿಸ್ ಅವರ ತಾಯಿಯವರ ಮೂಲ ತುಳಸೇಂದ್ರಪುರಂ ಪೈಂಗನಾಡು. ಹೀಗಾಗಿ ಇಲ್ಲಿಯ ಜನರು ತಮ್ಮ ಊರಿನ ಹೆಣ್ಣುಮಗಳು ಇಂದು ವಿಶ್ವದ ಆರ್ಥಿಕ ಬಲಿಷ್ಠ ದೇಶದ ಮೊದಲ ಉಪಾಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ ಎಂದು ಸಂತಸಪಟ್ಟುಕೊಂಡಿದ್ದು, ಸಂಭ್ರಮಿಸುತ್ತಿದ್ದಾರೆ. ಗ್ರಾಮದಲ್ಲಿ ಪಟಾಕಿ ಹಚ್ಚಿ, ಸಿಹಿತಿಂಡಿ ಹಂಚಿ, ಕಮಲಾ ಹ್ಯಾರಿಸ್ ಫೋಟೋದೊಂದಿಗೆ ಭಿತ್ತಿಪತ್ರ ಹಿಡಿದು ಸಂಭ್ರಮಪಟ್ಟರು, ಮಾತ್ರವಲ್ಲದೇ ಮನೆಯ ಮುಂದೆ ರಂಗೋಲಿ ಹಾಕಿದ್ದಾರೆ.
ಕಮಲಾ ಹ್ಯಾರಿಸ್ ಹುಟ್ಟಿದ್ದು ಅಮೆರಿಕದ ಕ್ಯಾಲಿಫೋರ್ನಿಯಾದ ಓಕ್ಲಾಂಡ್ ನಲ್ಲಿ, ಅವರ ತಾಯಿ ಶ್ಯಾಮಲಾ ಗೋಪಾಲನ್ ಚೆನ್ನೈಯಲ್ಲಿ ಜನಿಸಿದ್ದರು. ನಮ್ಮ ಗ್ರಾಮದ ಮಗಳು ಕಮಲಾ ಹ್ಯಾರಿಸ್ ಇಲ್ಲಿಗೆ ಭೇಟಿ ಕೊಡಬೇಕು ಎಂದು ನಾವು ಬಯಸುತ್ತೇವೆ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದೇವತೆ ಶ್ರೀಧರ್ಮ ಶಾಸ್ತ ಅಯ್ಯನರ್‌ಗೆ ಸಲ್ಲಿಸಿದ ಪ್ರಾರ್ಥನೆ ಫಲ ಕೊಟ್ಟಿದೆ ಎನ್ನುತ್ತಾರೆ ಗ್ರಾಮದ ಮುಖ್ಯಸ್ಥ ಸುಧಾಕರ್. ಕಮಲಾ ಹ್ಯಾರಿಸ್ ಅವರ ತಾಯಿಯ ತಂದೆ, ಅಜ್ಜ ಪಿ.ವಿ. ಗೋಪಾಲನ್ ಅವರು ಕಟ್ಟಿಸಿದ ಕುಲ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.