ಅಕ್ಷರಶಃ ನಲುಗಿದ ಅಫ್ಘಾನ: ಅತ್ಯಾಚಾರಿಗಳ ಕಪಿಮುಷ್ಠಿಯಲ್ಲಿ ಹೆಣ್ಣುಮಕ್ಕಳು! ಹೊರಹೋಗದಂತೆ ನಾಲ್ಕೂ ಕಡೆ ದಿಗ್ಬಂಧನ!

taliban1
Published on

ಕಾಬೂಲ್: ಅಫ್ಘಾನಿಸ್ತಾನದ ಪ್ರತಿಯೊಂದು ಜಿಲ್ಲೆ, ಹಳ್ಳಿ, ಪಟ್ಟಣ ಸೇರಿದಂತೆ ದೇಶದ ರಾಜಧಾನಿ ಕಾಬೂಲ್​ ಅನ್ನು ವಶಪಡಿಸಿಕೊಂಡು ಇದೀಗ ಇಡೀ ದೇಶಕ್ಕೆ ದೊರೆಯಾಗಿರುವ ತಾಲಿಬಾನಿಗಳಿಂದ ಅಫ್ಘಾನಿಸ್ತಾನ ಅಕ್ಷರಶಃ ನಲುಗಿ ಹೋಗಿದೆ.

ಇಸ್ಲಾಮಿಕ್ ಭಯೋತ್ಪಾದಕರ ಮುಂದೆ ಅಫ್ಘಾನ ಸರ್ಕಾರ ಶರಣಾದ ನಂತರ ಹಾಲಿ ಅಧ್ಯಕ್ಷ ಅಶ್ರಫ್ ಘನಿಮುಲ್ಲಾ ಹುದ್ದೆ ತೊರೆದಿದ್ದು, ಈ ಜಾಗದಲ್ಲಿ ತಾಲಿಬಾನ್​ ಉಗ್ರ ಅಬ್ದುಲ್ ಘನಿ ಬರದಾರ್ ತಾಲಿಬಾನ್ ಅಧ್ಯಕ್ಷರಾಗಿ ನೇಮಕಗೊಂಡಿದ್ದಾನೆ.

ಕಾಬೂಲ್​ ಅನ್ನು ಯಾವುದೇ ಹಿಂಸೆ ಮಾಡದೇ ಶಾಂತಿಯುತವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೂ ಇದರ ಸತ್ಯಾಸತ್ಯತೆ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಏಕೆಂದರೆ ಕಳೆದೊಂದು ತಿಂಗಳಿನಿಂದ ತಾಲಿಬಾನ್​ ಉಗ್ರರು ನಡೆಸಿರುವ ಹಿಂಸೆ, ಅತ್ಯಾಚಾರ, ಹರಿಸಿದ ರಕ್ತಕ್ಕೆ ಲೆಕ್ಕವೇ ಇಲ್ಲ. ರಸ್ತೆ ರಸ್ತೆಗಳಲ್ಲಿ ಹೆಣಗಳ ರಾಶಿಯ ಮೇಲೆಯೇ ನಡೆದಾಡುತ್ತಾ ಬಾಲಕಿಯರು, ಮಹಿಳೆಯರ ಮೇಲೆ ವಿಕೃತವಾಗಿ ಅತ್ಯಾಚಾರ ಎಸಗುತ್ತಾ ಮೆರೆದಾಡಿದ್ದ ತಾಲಿಬಾನಿಗಳ ವಶಕ್ಕೆ ಸಂಪೂರ್ಣ ದೇಶದ ಜನರು ಒಳಪಟ್ಟಿದ್ದಾರೆ.

ತಮ್ಮ ಪ್ರಾಣ ಕಾಪಾಡಿಕೊಳ್ಳುವುದು ಹೇಗೆ ಎಂದು ಪುರುಷರು ನಲುಗಿ ಹೋಗಿದ್ದರೆ, ಈ ಅತ್ಯಾಚಾರಿಗಳಿಂದ ತಮ್ಮ ಮಾನ, ಪ್ರಾಣ ಕಾಪಾಡಿಕೊಳ್ಳುವುದು ಹೇಗೆ ಎಂದು ಭವಿಷ್ಯವನ್ನು ನೆನೆದು ಮಹಿಳೆಯರು ಕಂಗೆಟ್ಟು ಹೋಗಿದ್ದಾರೆ. ದೇಶವನ್ನು ಬಿಟ್ಟು ತೊಲಗುವಲ್ಲಿ ಇದಾಗಲೇ ಕೆಲವರು ಯಶಸ್ವಿಯಾಗಿದ್ದರೂ, ಇದೀಗ ಇಡೀ ಅಫ್ಘಾನಿಸ್ತಾನ ಉಗ್ರರ ಕೈವಶವಾಗಿರುವ ಹಿನ್ನೆಲೆಯಲ್ಲಿ ನಾಲ್ಕೂ ದಿಕ್ಕುಗಳಿಂದ ದಿಗ್ಬಂಧನ ಮಾಡಿದ್ದಾರೆ. ಆದ್ದರಿಂದ ತಾವಿರುವ ಸ್ಥಳದಿಂದ ಹೊರಕ್ಕೆ ಹೋಗುವುದನ್ನು ನೆನೆಸಿಕೊಳ್ಳಲೂ ಆಗದ ಸ್ಥಿತಿ ಇಲ್ಲಿಯವರದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net