

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಹಿಂದೆ ನಿಗೂಢ ಕಾರಣವಿದ್ದು, ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಪಾಟ್ನಾ ನಿವಾಸಿಗಳಾದ ಅಲ್ಕಾ ಪ್ರಿಯಾ ಹಾಗೂ ಇತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ನಟ ಸುಶಾಂತ್ ಸಿಂಗ್ ರಜಪೂತ್ ನಿಧನ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಪ್ರತಿನಿತ್ಯ ಚರ್ಚೆಯಾಗುತ್ತಿದೆ. ಹಲವಾರು ನಟರು ಇವರ ಕೇಸ್ನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ ಎಂದು ಅವರು ಅರ್ಜಿಯಲ್ಲಿ ಹೇಳಿದ್ದರು.
ಸುಶಾಂತ್ ಸಿಂಗ್ ಸಮಚಿತ್ತ ಮನಸ್ಸಿನ ವ್ಯಕ್ತಿ. ಆತ ತರಬೇತಿಗಾಗಿ ಅಮೆರಿಕದ ನಾಸಾಗೆ ತೆರಳುವವರಿದ್ದರು. ಇಂಥ ಒಳ್ಳೆಯ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಲು ಸಾಧ್ಯವಿಲ್ಲ ಎಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಅದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಮೂರ್ತಿಗಳು, ಈ ಹಂತದಲ್ಲಿ ಇದನ್ನು ಸಿಬಿಐಗೆ ವಹಿಸಲು ಸಾಧ್ಯವಿಲ್ಲ. ಪೊಲೀಸರಿಗೆ ಅವರ ಕೆಲಸ ಮಾಡುವುದಕ್ಕೆ ಬಿಟ್ಟುಬಿಡಿ. ಈ ಪ್ರಕರಣವನ್ನು ಸಿಬಿಐಗೆ ವಹಿಸುವುದು ಏಕೆ? ಪೊಲೀಸರಿಗೆ ಅವರದ್ದೇ ಆದ ಕೆಲಸಗಳಿವೆ, ಅದನ್ನು ಮಾಡುವುದಕ್ಕೆ ಅವರನ್ನು ಬಿಡಿ ಎಂದು ಹೇಳಿದೆ. ಅಷ್ಟೇ ಅಲ್ಲದೇ, ಸುಶಾಂತ್ ಒಳ್ಳೆಯ ವ್ಯಕ್ತಿಯಾಗಿದ್ದರು ಎಂಬ ವಕೀಲರ ವಾದಕ್ಕೆ ಪ್ರತಿಕ್ರಿಯಿಸಿರುವ ಕೋರ್ಟ್, ಒಳ್ಳೆಯ ಮನುಷ್ಯ, ಕೆಟ್ಟ ಮನುಷ್ಯ ಎಂಬುದಕ್ಕೂ, ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಹೇಳಿದೆ.
ಸುಶಾಂತ್ ಸ್ನೇಹಿತೆ ರಿಯಾ ಚಕ್ರವರ್ತಿ ಕೂಡ ಇತ್ತೀಚೆಗೆ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆದು ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಕೋರಿದ್ದರು.