ಐನೂರು ರೂಪಾಯಿ ಆಸುಪಾಸುಪಾಸಿನ ಖರ್ಚಿನಲ್ಲಿ ನೊಬೆಲ್ ಪ್ರಶಸ್ತಿ!

nobel
Published on

| ಸುರೇಶ್ ಮರಕಾಲ ಸಾಯ್ಬರಕಟ್ಟೆ

ಒಬ್ಬ ವ್ಯಕ್ತಿಯ ಸಾಧನೆಯ ಪರಮೋಚ್ಛವನ್ನು ಅಳೆಯಲು ಪ್ರಶಸ್ತಿ, ಪುರಸ್ಕಾರಗಳೇ ಮಾನಕಗಳಲ್ಲ. ಆದಾಗ್ಯೂ, ಪ್ರಸ್ತುತ ಜಗತ್ತಿನಲ್ಲಿ ಒಬ್ಬ ವ್ಯಕ್ತಿಯ ಅತ್ಯುನ್ನತ ಸಾಧನೆಯನ್ನು ಗುರುತಿಸುವುದು ಆತನಿಗೆ ನೀಡಲಾಗುವ ‘ನೊಬೆಲ್’ ಪ್ರಶಸ್ತಿಯಿಂದ ಎಂಬುದಂತೂ ಎಲ್ಲರೂ ಒಪ್ಪಿರುವ ಮಾತು! ಆ ಪ್ರಶಸ್ತಿಗೆ ಆಯ್ಕೆಯ ಮಾನದಂಡಗಳು, ಎಂದೋ ಆಯ್ಕೆಯಾಗಬೇಕಾಗಿದ್ದ ನಮ್ಮ ಹಾಗೂ ಪ್ರಪಂಚದ ಅನೇಕ ಮಹಾನುಭಾವರ ಹೆಸರು ಇಂದಿಗೂ ಪಟ್ಟಿಯಲ್ಲಿ ಸೇರದೇ ಇರುವುದು ಮೊದಲಾದ ಯಾವತ್ತೂ ಚರ್ಚೆಗಳನ್ನು ಸಧ್ಯಕ್ಕೆ ನಮ್ಮ ಸೀಮಾ ಪರಿಧಿಯಿಂದ ಬದಿಗಿಡೋಣ! ಒಬ್ಬ ವ್ಯಕ್ತಿ ನೊಬೆಲ್ ಪ್ರಶಸ್ತಿ ಪಡೆದನೆಂದರೆ, ಇಡೀ ಜಗತ್ತೇ ಆತನನ್ನು ಗೌರವಿಸುತ್ತದೆ, ಸಾಧಕರ ಕಣ್ಣಿನಲ್ಲಿ ಆತ ಸಾಕ್ಷಾತ್ ಮನುಷ್ಯ ರೂಪದ ದೇವರಾಗುತ್ತಾನೆ! ಸ್ವೀಕರಿಸಿದ ವ್ಯಕ್ತಿಗೂ ಅಷ್ಟೇ!, ಆತನ ಮೇರು ಸಾಧನೆಗೆ ಸಿಕ್ಕ ಹಿಮಾಲಯದೆತ್ತರದ ಗೌರವ ದೊಡ್ಡ ಪ್ರಶಾಂತ ಭಾವವನ್ನೇ ತಂದುಕೊಡುತ್ತದೆ. ಹಾಗೆಂದು ಇಂತಹಾ ನೊಬೆಲ್ ಪ್ರಶಸ್ತಿಯನ್ನು ಪಡೆಯುವುದೇನು ಹುಡುಗಾಟಿಕೆಯ ಮಾತೇ? ಅದಕ್ಕಾಗಿ ತಮ್ಮ ಸಾವಿರಾರು ಜನರು ತಮ್ಮ ಜೀವಮಾನವನ್ನೇ ಧಾರೆಯೆರೆದಿದ್ದಾರೆ, ಅನೇಕರು ಕೋಟಿಗಟ್ಟಲೆ ಹಣವನ್ನು ತಮ್ಮ ಸಂಶೋಧನೆಗಾಗಿ, ಸಾಧನೆಗಾಗಿ ಖರ್ಚು ಮಾಡಿದವರಿದ್ದಾರೆ. ಆದರೆ ಇಲ್ಲೊಬ್ಬರು ವಿಜ್ಞಾನಿ, ನೊಬೆಲ್ ಪ್ರಶಸ್ತಿಗೆ ಕಾರಣವಾದ ತಮ್ಮ ಪ್ರಯೋಗದ ಉಪಕರಣಗಳಿಗೆ ಮಾಡಿದ ಖರ್ಚು ಕೇವಲ ಸುಮಾರು ಐನೂರು ರೂಪಾಯಿಗಳು! ಮನುಷ್ಯ ಮಾತ್ರರಾದ ನಾವು ಇದನ್ನು ನಂಬಲು ಸಾಧ್ಯವಿದೆಯೆ?! ಆದರೆ ನಂಬಲೇ ಬೇಕಿದೆ! ಏಕೆಂದರೆ ನೊಬೆಲ್ ಪ್ರಶಸ್ತಿಯ ಸಾಧನೆಗಾಗಿ ಪ್ರಪಂಚದ ವಿಜ್ಞಾನಿಗಳು ಮಾಡುವ ದೊಡ್ಡ ದೊಡ್ಡ ಖರ್ಚಿನೆದುರು ‘ಪುಡಿಗಾಸು’ ಐನೂರು ರೂಪಾಯಿಗಳಲ್ಲಿ ಈ ದೈತ್ಯ ಸಾಧನೆಯನ್ನು ಮಾಡಿದವರು ಯಾರೋ ಅಲ್ಲ, ನಮ್ಮ ದೇಶದವರೇ! ಜಗತ್ತು ಇಂದು ‘ರಾಮನ್ ಸಿದ್ಧಾಂತ’ ಎಂದು ಪೂಜಿಸುವ ಸಿ.ವಿ.ರಾಮನ್ ಅವರೇ ಕೇವಲ ಐನೂರು ರೂಪಾಯಿಯ ಆಚೆಈಚೆಗಳಲ್ಲಿ ನೊಬೆಲ್ ಪ್ರಶಸ್ತಿಯಂತಹಾ ಸಾಧನೆಯ ಶಿಖರವನ್ನು ಏರಿದ ಮಹಾನುಭಾವರು!!

ಚಂದ್ರಶೇಖರ ವೆಂಕಟ ರಾಮನ್ ಏಳನೇ ನವೆಂಬರ್ 1888ರಂದು – ಎಂದರೆ ನಿನ್ನೆಯ ದಿನ- ತಮಿಳುನಾಡಿನ ತಿರುವನಂತಪುರದ ತಿರುವನೈಕ್ಕಾವಲ್‌ನಲ್ಲಿ ಚಂದ್ರಶೇಖರ್ ಅಯ್ಯರ್ ಹಾಗೂ ಪಾರ್ವತಿ ಅಮ್ಮಾಳರ ಎಂಟು ಮಕ್ಕಳ ಸಂಸಾರದಲ್ಲಿ ಎರಡನೆಯವನಾಗಿ ಜನಿಸಿದರು. (ಇಪ್ಪತ್ತೊಂದು ವರ್ಷಗಳ ಹಿಂದೆ ಇದೇ ದಿನ ನೊಬೆಲ್ ಪ್ರಶಸ್ತಿ ಪಡೆದ ಇನ್ನೊಬ್ಬರು ಪ್ರಾತಃಸ್ಮರಣೀಯ ವಿಜ್ಞಾನಿ ಮೇಡಂ ಕ್ಯೂರಿ ಕೂಡಾ ಜನಿಸಿದ್ದರು ಎಂಬುದು ಮತ್ತೊಂದು ಸೋಜಿಗದ ಸಂಗತಿ!) ಶಾಲಾ ಶಿಕ್ಷಕರಾಗಿದ್ದ ತಂದೆಗಿದ್ದ ಕ್ರೀಡೆಗಳಲ್ಲಿನ ವಿಪರೀತ ಆಸಕ್ತಿ ಬಾಲಕ ರಾಮನ್‌ಗೆ ಇರಲೇ ಇಲ್ಲ! ಆದರೆ ತಂದೆಯ ಇನ್ನೊಂದು ಹವ್ಯಾಸವಾದ ಪುಸ್ತಕಗಳ ಸಂಗ್ರಹ ಹಾಗೂ ಅವುಗಳ ಗಂಭೀರ ಓದಿನ ಹವ್ಯಾಸ ಮಾತ್ರ- ತಂದೆಯನ್ನೂ ಮೀರುವಷ್ಟು- ಬಾಲ್ಯದಲ್ಲೇ ಆತನಿಗೆ ಮೈಗೂಡಿತು. ಜೊತೆಗೆ ತಂದೆಯ ಅಚ್ಚುಮೆಚ್ಚಿನ ಹವ್ಯಾಸಗಳಾದ ಶಾಸ್ತ್ರೀಯ ಸಂಗೀತ, ವಯೋಲಿನ್ ವಾದನಗಳೂ ಹುಡುಗನಲ್ಲಿ ರಕ್ತಗತವಾಗಿ ಬಂದಿದ್ದವು. ಬಾಲಕನಾಗಿದ್ದಾಗ ರಾಮನ್ ಮೇಲೆ ಎಡ್ವಿನ್ ಅರ್ನಾಲ್ಡನ “ಲೈಟ್ ಆಫ್ ಏಶಿಯಾ”, ರೇಖಾಗಣಿತದ ಮೇಲಿನ “ದಿ ಎಲಿಮೆಂಟ್ಸ್ ಆಫ್ ಯೂಕ್ಲಿಡ್” ಹಾಗೂ ಜರ್ಮನ್ ವಿಜ್ಞಾನಿ ಹೆಮೋಲ್ಟ್ಸ್‌ನ “ದಿ ಸೆನ್ಸೇಶನ್ಸ್ ಆಫ್ ಟೋನ್ಸ್” ಎಂಬ ಮೂರು ಪುಸ್ತಕಗಳು ಗಾಢ ಪರಿಣಾಮ ಬೀರಿದ್ದವು. ಮುಂದೆ ವಿಶ್ವ ಪ್ರಸಿದ್ಧ ವಿಜ್ಞಾನಿಯಾದಾಗಲೂ ಅವರ ಸಂಶೋಧನೆ-ಬರಹಗಳಲ್ಲಿ ಈ ಮೂರು ಪುಸ್ತಕಗಳ ಪ್ರಭಾವವನ್ನು ಸ್ಪಷ್ಟವಾಗಿ ಕಾಣಬಹುದು.

ವೆಂಕಟರಾಮನ್ ಜನ್ಮತಃ ಮಹಾನ್ ಪ್ರತಿಭಾವಂತ! ಅಚ್ಚರಿಯ ಸಂಗತಿಯೆಂದರೆ ತನ್ನ ಹನ್ನೆರಡನೇ ವಯಸ್ಸಿಗೇ ಮೆಟ್ರಿಕ್ಯುಲೇಶನ್ ಮುಗಿಸಿದ್ದ! ಕೇವಲ ಹದಿಮೂರನೆ ಮಯಸ್ಸಿಗೆ-ಇನ್ನೂ ಎಂಟನೇ ತರಗತಿಯಲ್ಲಿರಬೇಕಾದ ಪ್ರಾಯದಲ್ಲಿ- ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ.ಎ.ಗೆ ಸೇರಿದ್ದ!! ಮೀಸೆದಾಡಿ ಬಿಟ್ಟ ಯುವಕರ ಮಧ್ಯದಲ್ಲಿ ಪುಟ್ಟ ಪೋರನಂತಿದ್ದ ರಾಮನ್ ಕಾಲೇಜಿಗೇ ವಿಚಿತ್ರವಾಗಿ ಕಾಣುತ್ತಿದ್ದ. ಇಂಗ್ಲಿಷಿನ ಮೇಷ್ಟು ಈ.ಎಚ್.ಈಲಿಟ್‌ರಂತೂ ದಿನಕ್ಕೊಮ್ಮೆಯಾದರೂ ಅವನನ್ನು “ನಿಜವಾಗ್ಲೂ ನೀನು ಬಿ.ಎ. ಕ್ಲಾಸಿನವನೇ ಹೌದೇನೋ...?” ಎಂದು ಕಿಚಾಯಿಸುತ್ತಿದ್ದರು! ಆದರೆ ಮೂರ್ತಿ ಚಿಕ್ಕದಾಗಿದ್ದರೂ ಇಡೀ ಕಾಲೇಜಿನ ಬಿ.ಎ. ವಿಭಾಗಕ್ಕೇ ಮೊದಲ ಸ್ಥಾನದ ಜೊತೆಗೆ ಭೌತಶಾಸ್ತ್ರದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ರಾಮನ್ ಎಲ್ಲರ ಹುಬ್ಬೇರಿಸಿದರು! ಆಗ ಅವರ ಪ್ರಾಯ ಕೇವಲ ಹದಿನಾರು! ಎಂದರೆ ಇನ್ನೂ ಹತ್ತನೇ ತರಗತಿಯಲ್ಲಿ ಇರುವ ವಯಸ್ಸು! ಈ ಕಾಲದಲ್ಲೇ ರಾಮನ್ನರ ಸಾಮರ್ಥ್ಯವನ್ನು ಗುರ್ತಿಸಿದ ಶಿಕ್ಷಕರು ಅವನಿಗೆ ಇಂಗ್ಲೆಂಡ್‌‌ನ ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯುವಂತೆ ಹೇಳಿದರು. ಆದರೆ ಮದ್ರಾಸ್ನ ಸಿವಿಲ್ ಸರ್ಜನ್ ಒಬ್ಬರು ರಾಮನ್ ‘ಮೆಡಿಕಲಿ ಅನ್ಫಿಟ್’ ಎನ್ನುವ ಮೂಲಕ ಅವಕಾಶವನ್ನು ದೂರ ಮಾಡಿದರು!! ಆದರೆ ಎಷ್ಟೋ ವರ್ಷಗಳ ನಂತರ ‘ನನ್ನನ್ನು ಅನುತ್ತೀರ್ಣ ಮಾಡಿದ ಸಿವಿಲ್ ಸರ್ಜನ್‌ಗೆ ಜನ್ಮಪೂರ್ತಿ ನಾನು ಆಭಾರಿ. ಅವರು ನನ್ನನ್ನು ಆಯ್ಕೆ ಮಾಡಿರುತ್ತಿದ್ದರೆ ನಾನು ಭಾರತದ ತಾಯ್ನಾಡನ್ನು ಬಿಟ್ಟು ದಶಕಗಳೇ ಆಗಿರುತ್ತಿತ್ತೇನೋ’ ಎಂದಿದ್ದರು! ಮುಂದೆ ಅದೇ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸ್ನಾತಕ್ಕೋತ್ತರ ವಿದ್ಯಾಭ್ಯಾಸಕ್ಕೆ ಸೇರಿದರು. ಅಲ್ಲಿನ ಸ್ವಾತಂತ್ರ್ಯಭರಿತ ವಾತಾವರಣ ರಾಮನ್ರ ಜೀವನಕ್ಕೆ ಹೊಸ ತಿರುವನ್ನೇ ನೀಡಿತು. ಎಂ.ಎ. ಅವಧಿಯಲ್ಲಿ ಸಂಶೋಧಿಸಿದ ಪಟ್ಟಕದಲ್ಲಿನ ಚದುರುವಿಕೆಯ ವಿಚಾರಗಳು ಬ್ರಿಟಿಷ್ ಪತ್ರಿಕೆಯಾದ ‘ಫಿಲಾಸಾಫಿಕಲ್ ಮ್ಯಾಗಜಿ಼ನ್’ನಲ್ಲಿ ಪ್ರಕಟವಾಯಿತು. ಆ ಮೂಲಕ ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಯೊಬ್ಬನ ಲೇಖನ ಮೊತ್ತ ಮೊದಲ ಬಾರಿಗೆ ‘ಫಿಲಾಸಾಫಿಕಲ್ ಮ್ಯಾಗಜಿ಼ನ್’ನಲ್ಲಿ ಮುದ್ರಣವಾಗಿ ಇತಿಹಾಸ ಸೃಷ್ಠಿಯಾಯಿತು! ಸ್ನಾತಕ್ಕೋತ್ತರ ವಿದ್ಯಾಭ್ಯಾಸವನ್ನು ಎಲ್ಲರೂ ನಿರೀಕ್ಷಿಸಿದಂತೆ ಪ್ರಥಮ ರಾಂಕ್‌ನೊಂದಿಗೆ ತೇರ್ಗಡೆಯಾದರು!

ಮುಂದೆ ರಾಮನ್ ಸಿವಿಲ್ ಸರ್ವಿಸ್ ಪರೀಕ್ಷೆಗೆ ಕುಳಿತು, ಪ್ರಥಮಿಗನಾಗಿ ತೇರ್ಗಡೆ ಹೊಂದಿ, ಅದೇ ವರ್ಷ ಎಂದರೆ 1907ರಲ್ಲಿ ಸಹಾಯಕ ಅಕೌಟೆಂಟ್ ಜನರಲ್ ಆಗಿ ಕೋಲ್ಕತ್ತಾಕ್ಕೆ ನೇಮಕವಾದರು. ಇದೇ ಸಮಯದಲ್ಲಿ ಹದಿಮೂರು ವರ್ಷದ ಹುಡುಗಿ ಲೋಕಸುಂದರಿ, ವೀಣೆಯಲ್ಲಿ ತ್ಯಾಗರಾಜರ ಕೃತಿಯನ್ನು ಅದ್ಭುತವಾಗಿ ನುಡಿಸುವುದನ್ನು ಕಂಡು ಮನಸೋತ ಹತ್ತೊಂಬತ್ತರ ಯುವಕ ರಾಮನ್ ಆಗಿನ ಎಲ್ಲಾ ಸಾಂಪ್ರದಾಯಗಳನ್ನು ಮುರಿದು ಮದುವೆಯಾದ! ಕೋಲ್ಕತ್ತಾದ ಸಹಾಯಕ ಅಕೌಂಟೆಂಟ್ ಜನರಲ್ ಹುದ್ದೆಗೆ ಸೇರಿದ ದಿನದಿಂದ ಕಛೇರಿಗೆ ಹೋಗುವ ದಾರಿ ಬದಿಯ ‘ಇಂಡಿಯನ್ ಅಸೋಸಿಯೇಶನ್ ಫಾರ್ ದ ಕಲ್ಟಿವೇಶನ್ ಆಫ್ ಸೈನ್ಸ್’ ಎಂಬ ಸಂಸ್ಥೆಯ ನೋಟ ಸದಾ ಉತ್ಸಾಹದ ಬುಗ್ಗೆಯಾಗಿದ್ದ ರಾಮನ್ನನ್ನು ಸೂಜಿಗಲ್ಲಿನಂತೆ ಆಕರ್ಷಿಸಿತ್ತು! ಮುಂದೆ ಈ ಸಂಸ್ಥೆ ರಾಮನ್ ಅವರ ಜೀವನದ ದಿಕ್ಕನ್ನೇ ಸಂಪೂರ್ಣ ಬದಲಿಸಿತೆನ್ನುವುದೂ ಅಷ್ಟೇ ಸತ್ಯ!! ರಾಮನ್ ಹುಟ್ಟುವುದಕ್ಕೂ ಹನ್ನೆರಡು ವರ್ಷಗಳ ಹಿಂದೆ ಪ್ರಾಯೋಗಿಕ ವಿಜ್ಞಾನದ ಮೂಲಕ ಸಮಾಜಕ್ಕೆ ಹೊಸ ದಿಕ್ಕನ್ನು ನೀಡುವ ಉದ್ದೇಶದಿಂದ ಮಹತ್ವಾಕಾಂಕ್ಷಿ ಮಹೇಂದ್ರಲಾಲ್ ಸರ್ಕಾರ್ ಈ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಆದರೆ ಸರ್ಕಾರ್ ತನ್ನ ಗುರಿಯ ಈಡೇರಿಕೆಯನ್ನು ಜೀವಿತಾವಧಿಯಲ್ಲೇ ಕಾಣುವ ಭಾಗ್ಯ ಪಡೆದಿರಲಿಲ್ಲ! ಆ ಕೆಲಸವನ್ನು ಅವರ ಮಗ ಅಮೃತ್‌ಲಾಲ್ ಅವರು ಹೊಸದಾಗಿ ಸಹಾಯಕ ಅಕೌಂಟೆಂಟ್ ಜನರಲ್ ಹುದ್ದೆಗೆ ಸೇರಿದ್ದ ರಾಮನ್ನರನ್ನು ತಮ್ಮ ಸಂಸ್ಥೆಗೆ ಸೆಳೆಯುವ ಮೂಲಕ ಈಡೇರಿಸಿಕೊಂಡರು!

ಹೆಮೋಲ್ಟ್ಸ್‌ನ ‘ದಿ ಸೆನ್ಸೇಶನ್ಸ್ ಆಫ್ ಟೋನ್ಸ್’ನಿಂದ ಪ್ರಭಾವಿತನಾಗಿದ್ದ ರಾಮನ್ ಶಬ್ದ-ತರಂಗಗಳ ಬಗ್ಗೆ ಅಸೀಮ ಆಸಕ್ತಿಯನ್ನು ತಾಳಿ, ಅಮೃತ್‌ಲಾಲ್‌‌ರಲ್ಲಿ ಸಂಗೀತ ಉಪಕರಣಗಳ ಸಂಶೋಧನೆಗೆ ಒಪ್ಪಿಗೆ ಪಡೆದುಕೊಂಡರು. ಆರಂಭದಲ್ಲಿ ಹೆಮೋಲ್ಟ್ಸ್‌ರ ಪರಿಕಲ್ಪನೆಯ ಸಹಾಯದಿಂದ ರಾಮನ್ ಒಂದೇ ತಂತಿಯ ಹಿಮ್ಮೇಳದ ಸಂಗೀತ ಸಾಧನವಾದ ‘ಏಕತಾರಿ’ಯ ಕಾರ್ಯವಿಧಾನವನ್ನು ಕಂಡುಹಿಡಿದರು. ಮುಂದೆ ತಮ್ಮಿಷ್ಟದ ಪಿಟೀಲನ್ನೇ ಅಧ್ಯಯನದ ವಸ್ತು ವಿಷಯವನ್ನಾಗಿ ಆರಿಸಿಕೊಂಡ ರಾಮನ್ ಪಿಟೀಲಿನ ಬಗ್ಗೆ ಆಮೂಲಾಗ್ರವಾಗಿ ಸಂಶೋಧನೆ ನಡೆಸಿದರು. ಪಿಟೀಲಿನ ಬಗ್ಗೆ ರಾಮನ್ ‘ಆನ್-ದ-ಮೆಕಾನಿಕಲ್-ಥಿಯರಿ ಆಫ್ ವೈಬ್ರೇಶನ್ಸ್ ಆಫ್ ಮ್ಯೂಸಿಕಲ್ ಇನ್ಸ್ಟ್ರೂಮೆಂಟ್ಸ್-ಆಫ್-ದ ವಯೋಲಿನ್ ವಿದ್ ರಿಸಲ್ಟ್ಸ್: ಭಾಗ-1’ ಎಂಬ ಅಪೂರ್ವಕೃತಿಯನ್ನು ರಚಿಸಿದರು. ವಿಶೇಷವೇನೆಂದರೆ, ತಮ್ಮ ಸಂಶೋಧನೆಯ ಪಿಟೀಲಿಗಾಗಿ ಯಾವುದೋ ಸಂಗೀತದ ಉಪಕರಣಗಳ ಮಾರಾಟ ಅಂಗಡಿಗೆ ಹೋಗಿ ಪಿಟೀಲನ್ನು ಖರೀದಿಸಲಿಲ್ಲ!! ಬದಲಿಗೆ ಸೈಕಲ್ ರಿಪೇರಿ ಅಂಗಡಿಯಿಂದ ಬಿಡಿ ಭಾಗಗಳನ್ನು ತಂದು, ತಮ್ಮದೇ ಕಲ್ಪನೆಯ ಪಿಟೀಲನ್ನು ತಯಾರಿಸಿದರು!! ಅದು ನೋಡಲು ಯಾವ ಕೋನದಿಂದಲೂ ಪಿಟೀಲಾಗಿರಲಿಲ್ಲ! ಆದರೆ ಪಿಟೀಲು ಮಾಡುವ ಎಲ್ಲಾ ಸಂಗೀತದ ಕೆಲಸಗಳನ್ನು ನಿಜವಾದ ಪಿಟೀಲಿಗಿಂತಲೂ ಅಚ್ಚುಕಟ್ಟಾಗಿ ಮಾಡುತ್ತಿತ್ತು!! ಏಕೆಂದರೆ ವಿಜ್ಞಾನದ ಜೊತೆಗೆ ರಾಮನ್ ಪಿಟೀಲನ್ನು ಕೂಡಾ ಅದ್ಭುತವಾಗಿ ನುಡಿಸುತ್ತಿದ್ದರು! ಜೊತೆಗೆ ವೀಣೆ, ತಂಬೂರಾ (ಹಿಮ್ಮೇಳ), ಮೃದಂಗ ಹಾಗೂ ತಬಲಾ ವಾದನವೂ ಅವರಿಗೆ ಕರತಲಾಮಲಕವಾಗಿತ್ತು! ಈ ಕ್ಷಣದಲ್ಲಿ ಅಲ್ಬರ್ಟ್ ಐನ್‍ಸ್ಟೈನ್ ನೆನಪಾಗುತ್ತಾರೆ!!

1920ರವರೆಗೆ ರಾಮನ್ರ ಗಮನ ಸಂಪೂರ್ಣವಾಗಿ ಶಬ್ದ ತರಂಗ ಸಂಶೋಧನೆಯ ಮೇಲೆ ಕೇಂದ್ರಿತವಾಗಿತ್ತು. ಅಲ್ಲಿಂದ ಮುಂದೆ ಅವರು ಬೆಳಕಿನ ಚದುರುವಿಕೆಯ ಕಡೆಗೆ ತಮ್ಮ ಸರ್ವಸ್ವವನ್ನೂ ಅರ್ಪಿಸಿಕೊಂಡುದರ ಫಲವೇ ವಿಶ್ವಶ್ರೇಷ್ಟ ನೊಬೆಲ್ ಪ್ರಶಸ್ತಿಯವರನ್ನು ಹುಡುಕಿಕೊಂಡು ಬಂತು!

ಈ ಮಧ್ಯೆ 1917ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಸರ್ ಅಶುತೋಷ್ ಮುಖರ್ಜಿಯವರು ಭೌತಶಾಸ್ತ್ರದ ತಾರಕಾನಾಥ ಪಲಿತ್ ಪ್ರೊಫೆಸರ್‌ಶಿಪ್ ಹುದ್ದೆಗೆ ಬಂದು ಸೇರುವಂತೆ ರಾಮನ್‌ರನ್ನು ಒತ್ತಾಯಿಸಿದರು. ಆದರೆ ಕೋಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಹಿಂದಿನಿಂದಲೂ ಬಂದ ಕಟ್ಟಲೆಯೊಂದಿತ್ತು- ಯಾರೇ ಭೌತಶಾಸ್ತ್ರದ ಪ್ರೊಫೆಸರ್ ಆಗಬೇಕಿದ್ದರೂ ವಿದೇಶದಲ್ಲಿ ವಿದೇಶೀಯರ ಕೈಕೆಳಗೆ ಅಧೀನದಲ್ಲಿ ಕಾರ್ಯನಿರ್ವಹಿಸಿದ ಅನುಭವ ಪಡೆದಿರಬೇಕಿತ್ತು. ರಾಮನ್‌ಗೆ ಈ ಅನುಭವವಿರಲಿಲ್ಲವಾದ್ದರಿಂದ ವಿಶ್ವವಿದ್ಯಾಲಯದ ಪ್ರೊಫೆಸರ್ಗಳು ರಾಮನ್ ಹೆಸರನ್ನು ತಿರಸ್ಕರಿಸಿದರು! ಸಹಜವಾಗಿಯೇ ಸ್ವಾಭಿಮಾನಿಯಾದ ರಾಮನ್ -ಅಂತಹ ಹುದ್ದೆಯು ತಾನಾಗಿಯೇ ಬಂದರೂ ಬೇಡವೆಂದೂ, ಯಾವುದೇ ಕಾರಣಕ್ಕೂ ಭಾರತೀಯನಾದ ತಾನು ವಿದೇಶೀಯನೊಬ್ಬನಿಗೆ ಸಲಾಂ ಹೊಡೆಯಲಾರೆನೆಂದು ಖಡಕ್ಕಾಗಿ ಹೇಳಿದರು!! ಇದು ರಾಮನ್ನರ ಅಚ್ಚಳಿಯದ ದೇಶಪ್ರೇಮಕ್ಕೆ ಹಿಡಿದ ಕೈಗನ್ನಡಿಯಾಗಿದೆ!! ಆದರೆ ‘ರಾಮನ್’ ಎಂಬ ಹೊಳೆವ ವಜ್ರ ತಮ್ಮಲ್ಲಿರಲೇಬೇಕೆಂದು ಅಶುತೋಷರು ಅಷ್ಟರವರೆಗೆ ಇಡೀ ವಿಶ್ವವಿದ್ಯಾಲಯವೇ ಪಾಲಿಸಿಕೊಂಡು ಬಂದಿದ್ದ ಆ ಕಾನೂನನ್ನೇ ರದ್ದುಗೊಳಿಸಿ ರಾಮನ್ರನ್ನು ಪ್ರೊಫೆಸರಾಗಿ ನೇಮಕ ಮಾಡಿಕೊಂಡರು!! ಎಲ್ಲರೂ ಹೌಹಾರಿದ್ದರೆ, ರಾಮನ್ ಪ್ರತಿಯಾಗಿ ಸಹಾಯಕ ಅಕೌಂಟೆಂಟ್ ಜನರಲ್ ಎಂಬ ಉನ್ನತ ಹಾಗೂ ಕೈತುಂಬ ಸಂಬಳ ತರುವ ಸರ್ಕಾರಿ ಹುದ್ದೆಯನ್ನು ತ್ಯಜಿಸಿ ಅದರ ಅರ್ಧ ಸಂಬಳಕ್ಕೆ ಸರಿಯಾದ ಪ್ರೊಫೆಸರ್ ಕೆಲಸಕ್ಕೆ ಸೇರಿ ಮತ್ತೊಂದು ಶಾಕ್ ನೀಡಿದ್ದರು!!

ಈ ಹೊಸ ಹುದ್ದೆ ಮುಳ್ಳಿನ ಹಾಸಿಗೆಯಾಗಿದ್ದರೂ ಕೂಡಾ ರಾಮನ್ ಅತ್ಯಂತ ಚಾಣಾಕ್ಷತನದಿಂದ ದಕ್ಷವಾಗಿ ನಿಭಾಯಿಸಿದರು. ರಾಮನ್ರಿಗೆ ಪ್ರಯೋಗಾಲಯದ ಮೇಲ್ವಿಚಾರಣೆಯಂತಹ ಮೇಲ್ದರ್ಜೆಯ ಕೆಲಸ ನೀಡಿದ್ದರೂ ಬೇಡವೆಂದು, ತರಗತಿಯಲ್ಲಿ ಪಾಠ ಮಾಡುವ ಕೈಂಕರ್ಯವನ್ನೇ ಆಸ್ಥೆಯಿಂದ ಆರಿಸಿಕೊಂಡರು!! ರಾಮನ್‌ರ ಉಪಸ್ಥಿತಿಯೇ ದೇಶದ ಮೂಲೆ ಮೂಲೆಯಿಂದ ವಿದ್ಯಾರ್ಥಿಗಳನ್ನು ಕೋಲ್ಕತ್ತಾಕ್ಕೆ ಎಳೆದು ತರುತಿತ್ತು! 1921ರಲ್ಲಿ ರಾಮನ್‌ಗೆ ಕೋಲ್ಕತ್ತಾ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿ ಗೌರವಿಸಿತು. ಅದೇ ವರ್ಷ ಅಶುತೋಷ್‌ರವರು ಯುರೋಪ್ ಅಧ್ಯಯನ ಪ್ರವಾಸಕ್ಕೆ ರಾಮನ್‌ರನ್ನು ಆಯ್ಕೆ ಮಾಡಿ ಕಳಿಸಿದರು. ಅದು ರಾಮನ್ರ ಪ್ರಥಮ ವಿದೇಶ ಪ್ರವಾಸವಾಗಿತ್ತು! ಯುರೋಪ್ನಲ್ಲಿ ರಾಮನ್ ರುದರ್ಫೋರ್ಡ್, ಬ್ರಾಗ್, ಜೆ. ಜೆ. ಥಾಮ್ಸನ್‌ರಂಥ ದಿಗ್ಗಜರನ್ನು ಭೇಟಿಯಾದರು. ಲಂಡನ್ನಲ್ಲಿ ಸೈಂಟ್ ಪೌಲ್ ಕೆಥೆಡ್ರಲ್ನ ‘ಪಿಸುಗುಟ್ಟುವ ಗ್ಯಾಲರಿ’ಯನ್ನು ಮಕ್ಕಳಂತೆ ಆನಂದಿಸಿ, ಕೆಲವೊಂದು ಪ್ರಯೋಗಗಳನ್ನೂ ಕೈಗೊಂಡರು.

ಸಾಗರದ ನೀಲಿಗೆ ಆಕಾಶದ ನೀಲಿ ಬಣ್ಣದ ಪ್ರತಿಫಲನವೇ ಕಾರಣ ಎಂದು ಪ್ರಪಂಚವೇ ನಂಬಿತ್ತು. ಆಕಾಶದ ನೀಲಿ ಬಣ್ಣಕ್ಕೆ ಸರಿಯಾದ ಕಾರಣ ನೀಡಿದ್ದ ವಿಜ್ಞಾನಿ ಲಾರ್ಡ್ರೇಲಿಗ್ ಕೂಡಾ ಕಡಲ ನೀಲಿಗೆ ಆಗಸದ ನೀಲಿಯ ಪ್ರತಿಫಲನವೇ ಕಾರಣವೆಂದು ಹೇಳಿದ್ದ! ಆದರೆ ಆಕಾಶದ ನೀಲಿ ಬಣ್ಣಕ್ಕೂ ಸಾಗರದ ಜಲರಾಶಿಯ ನೀಲಿಗೂ ಯಾವುದೇ ಕಾರ್ಯ ಕಾರಣ ಸಂಬಂಧವಿಲ್ಲವೆಂಬುದು ಈ ಪ್ರಚಂಡನಿಗೆ ಅನಿಸಿ, ವಾಪಾಸ್ಸು ಬರುವಾಗ ಮೆಡಿಟರೇನಿಯನ್ ಸಮುದ್ರದ ನಯನ ಮನೋಹರ ಸ್ಫಟಿಕ ನೀಲಿ ಜಲರಾಶಿಯನ್ನು ದಿನಗಟ್ಟಲೆ ನೋಡುತ್ತಾ ನೀರಿನ ನೀಲಿ ಬಣ್ಣಕ್ಕೆ ಕಾರಣವನ್ನು ಹಡಗಿನಡೆಕ್ಕಿನ ಮೇಲೆ ದಿನ-ಗಂಟೆಗಳ ಪರಿವೆಯಿಲ್ಲದೆ ಚಿಂತಿಸತೊಡಗಿದರು. ಮುಂಡಾಸು ಸುತ್ತಿಕೊಂಡಿದ್ದ ಭಾರತೀಯ ವಿಜ್ಞಾನಿಯೊಬ್ಬ ಹಡಗಿನಡೆಕ್ಕೆಯ ಮೇಲೆ ಅತ್ಯಂತ ಸರಳ ಉಪಕರಣವಾದ ಪೋಲರೈಸಿಂಗ್ ಪಟ್ಟಕದ ಮೂಲಕ ಕಡಲ ನೀರನ್ನು ಪರೀಕ್ಷಿಸುವ ನೋಟವಂತೂ ಪ್ರಾಚೀನ ಋಷಿ ಮುನಿಗಳನ್ನು ನೆನಪಿಸುವಂತಿತ್ತು!! ಗಾಳಿಯ ಅಣುಗಳಂತೆ ನೀರಿನ ಅಣುಗಳೂ ಕೂಡಾ ಬೆಳಕನ್ನು ಚದುರಿಸುತ್ತವೆಂದು ಹಡಗಿನಲ್ಲಿ ಕಂಡುಕೊಂಡುದನ್ನು “ನೇಚರ್” ಪತ್ರಿಕೆಗೆ ಕಳಿಸಿದರು. ಮುಂದೆ ಆಹೋ-ರಾತ್ರಿ ಅವರ ಸಂಪೂರ್ಣ ಅಧ್ಯಯನ ಬೆಳಕಿನ ಅಣುಗಳ ಚದುರುವಿಕೆಯತ್ತ ಹಾಯಿತು! 1923ರಲ್ಲಿ ‘ಕಾಂಪ್ಟನ್ ಪರಿಣಾಮ’ವೂ ಇವರ ಸಿದ್ಧಾಂತವನ್ನೇ ಹೇಳಿದ ನಂತರ ರಾಮನ್ ತಮ್ಮದೇಯಾದ ತಂಡವೊಂದನ್ನು ಕಟ್ಟಿಕೊಂಡರು. 1923, ಫೆಬ್ರವರಿ 27ರಂದು ನಡುರಾತ್ರಿಯವರೆಗೆ ರಾಮನ್ ತಂಡ ಪ್ರಯೋಗ ನಡೆಸಿದರೂ ಸರಿಯಾದ ಉತ್ತರ ಸಿಗಲಿಲ್ಲ. ಮರುದಿನ ಫೆಬ್ರವರಿ 28ರ ನಸುಕಿನಲ್ಲೇ ರಾಮನ್ ಪಾರದರ್ಶಕ ವಸ್ತುವಿನ ಮೂಲಕ ಒಳಹಾಯಿಸಿದ ಬೆಳಕಿನ ದಿಕ್ಕಿಗಿಂತ ಹೊರಬರುವ ಕಿರಣಗಳು ಭಿನ್ನವಾದ ದಿಕ್ಕಿಗೆ ಹೊರಳಿದ್ದು, ಇದರಲ್ಲಿ ಕೆಲವೊಂದು ಭಾಗದ ಕಿರಣಗಳ (ರಾಮನ್ ಕಿರಣ) ತರಂಗಾಂತರ ಮೂಲಕ್ಕಿಂತ ಬದಲಾಗಿರುತ್ತದೆ ಎಂದೂ, ಬೆಳಕು ದ್ರವ ಮಾಧ್ಯಮದಲ್ಲಿ ಚದುರಿಕೊಂಡು ಹಾಯುವಾಗ ತನ್ನ ತರಂಗಾಂತರವನ್ನು ಬದಲಿಸುತ್ತದೆ ಎಂಬ ದಿವ್ಯವಾದ ಸತ್ಯವೊಂದನ್ನು ಕಂಡುಕೊಂಡರು. ಇದೇ ‘ರಾಮನ್ ಪರಿಣಾಮ’ವೆಂದು ಎಂದೆಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ, ಭೌತಶಾಸ್ತ್ರದಲ್ಲಿ ಭಾರತ ಮಾತ್ರವಲ್ಲ ಏಶಿಯಾದಲ್ಲೇ ಮೊತ್ತಮೊದಲ ನೊಬೆಲ್ ಪ್ರಶಸ್ತಿ 1930ರಲ್ಲಿ ರಾಮನ್ರನ್ನು ಹುಡುಕಿಕೊಂಡು ಬಂತು!! ನೊಬೆಲ್ ಪ್ರಶಸ್ತಿಗೆ ಕಾರಣವಾದ ‘ರಾಮನ್ ಪರಿಣಾಮ’ದ ದರ್ಶನ ಪಡೆದ ಫೆಬ್ರವರಿ28ನ್ನು ಭಾರತ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ಯಾಗಿ ಆಚರಿಸುತ್ತಿದೆ.

ರಾಮನ್ ಅವರ ನೊಬೆಲ್ ಪ್ರಶಸ್ತಿಯ ವಿಚಾರದಲ್ಲೂ ಎರಡು ನಂಬಲಸಾಧ್ಯವಾದ ಸಂಗತಿಗಳಿವೆ! ಒಂದನೆಯದು; ಈ ಲೇಖನದ ಆರಂಭದಲ್ಲೇ ಹೇಳಿದ –ನೊಬೆಲ್ ಪ್ರಶಸ್ತಿಗೆ ಕಾರಣವಾದ ಉಪಕರಣಗಳಿಗೆ ಕೇವಲ ಐನೂರು ರೂಪಾಯಿಗಳ ಆಸುಪಾಸು ಖರ್ಚು ಮಾಡಿದ್ದು. ಇದರ ಬಗ್ಗೆ ಚರ್ಚೆಗಳಾಗಿವೆ. ಡಾ. ರಾಜೇಂದರ್ ಸಿಂಗ್ ಅವರು ‘ಸಿ.ವಿ.ರಾಮನ್ಸ್ ಲ್ಯಾಬರೇಟರಿ ಆಂಡ್ ಡಿಸ್ಕರಿ ಆಫ್ ದಿ ರಾಮನ್ ಇಫೆಕ್ಟ್’ ಎಂಬ ತಮ್ಮ ಪುಸ್ತಕದಲ್ಲಿ ಅದು ಐನೂರು ಅಲ್ಲ, ಬದಲಿಗೆ ಬಳಸಿದ ರಾಸಾಯನಿಕ ವಸ್ತುಗಳನ್ನು ಬಿಟ್ಟು ಏಳು ಸಾವಿರದ ಆರು ನೂರಾ ಮೂವತ್ತು ಎಂದಿದ್ದಾರೆ. ಸಿಂಗ್ರವರು ಹೇಳಿದ ಮೊತ್ತವನ್ನೇ ನಾವು ಪರಿಗಣಿಸುವುದಾದರೂ, ನಾವು ನೆನಪಿನಲ್ಲಿಟುಕೊಳ್ಳಬೇಕು- ನೊಬೆಲ್ ಪ್ರಶ್ತಿಯಂತಹಾ ಮಹೋನ್ನತ ಸಾಧನೆಯನ್ನು ಮಾಡುವಲ್ಲಿ ಈ ಖರ್ಚು ಯಾವ ಲೆಕ್ಕದ್ದು?! ಇನ್ನೊಂದು ವಿಚಾರ; ರಾಮನ್ ತಮ್ಮ ಪ್ರಯೋಗದ ಉಪಕರಣಗಳಿಗೆ ಮಾಡಿದ ಖರ್ಚು ಸುಮಾರು ಐನೂರು ಎಂದಿದ್ದು ಯಾರೋ ಅಲ್ಲ, ಬದಲಿಗೆ ಸಿ.ವಿ.ರಾಮನ್ರ ಸ್ವಂತ ವಿದ್ಯಾರ್ಥಿಯಾಗಿದ್ದ ದೊಡ್ಡ ಮೇಧಾವಿಯೂ ಆಗಿ ಕೀರ್ತಿ ಸಂಪಾದಿಸಿದ ಎ. ಜಯರಾಮನ್ ಎಂಬುದನ್ನು ನಾವು ಮರೆಯಬಾರದು! ಇನ್ನು ಎರಡನೆಯ ವಿಚಾರವಂತೂ ಇನ್ನೂ ವಿಸ್ಮಯ ಹುಟ್ಟಿಸುತ್ತದೆ! 1930ರಲ್ಲಿ ನೊಬೆಲ್ ಪ್ರಶಸ್ತಿಯ ಆಯ್ಕೆ ಸಮಿತಿಯ ಮುವತ್ತೊಂಭತ್ತು ವಿಜ್ಞಾನಿಗಳು ಇಪ್ಪತ್ತೊಂದು ಜನರ ಹೆಸರನ್ನು ಸೂಚಿಸಿದರು. ಈ ಇಪ್ಪತ್ತೊಂದರಲ್ಲಿ ಸಿ.ವಿ.ರಾಮನ್‌ರೊಬ್ಬರ ಹೆಸರನ್ನು ಮಾತ್ರ ಹತ್ತು ಬಾರಿ ಅನುಮೋದಿಸಲಾಗಿತ್ತು!! ಇದು ‘ರಾಮನ್ ಪರಿಣಾಮ’ದ ತಾಕತ್ತು ಹೇಗೆ ಇಡೀ ಪ್ರಪಂಚಕ್ಕೇ ವ್ಯಾಪಿಸಿತ್ತು ಎನ್ನುವುದಕ್ಕೆ ಸಾಕ್ಷಿ!! ಜೊತೆಗೆ ಭೌತ-ವಿಜ್ಞಾನಿಯೊಬ್ಬ ಹೊಸ ಸಂಶೋಧನೆ ಮಾಡಿದಾಗ, ಅದನ್ನು ಜಗತ್ತಿನಾದ್ಯಂತ ಪರೀಕ್ಷಿಸಿ ನಾಲ್ಕೈದು ವರ್ಷ ಕಳೆದ ಮೇಲೆಯೇ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಆದರೆ ರಾಮನ್‌ರ ಸಂಶೋಧನೆ ಜಗತ್ತನ್ನೇ ಎಷ್ಟು ಅಚ್ಚರಿಯ ಮೂಟೆಯೊಳಗೆ ಬೀಳಿಸಿತ್ತೆಂದರೆ, ರಾಮನ್ ತಮ್ಮ ಸಂಶೋಧನೆಯನ್ನು ಪ್ರಕಟಿಸಿದ ಕೇವಲ ಎರಡೇ ವರ್ಷಗಳಲ್ಲಿ ನೊಬೆಲ್ ಪದಕ ರಾಮನ್ರ ಕುತ್ತಿಗೆಗೆ ಜಿಗಿಯಲು ಕಾದು ಕುಳಿತಿತ್ತು!!

ಮುಂದೆ ಕೋಲ್ಕತ್ತಾ ವಿ.ವಿ.ಯ ನಂತರ ರಾಮನ್ ಬೆಂಗಳೂರಿನ I.I.Sc.ನ ನಿರ್ದೇಶಕರಾಗಿ 1948ರಲ್ಲಿ ನಿವೃತ್ತರಾದರು. ನಂತರ ಜೀವಿತದ ಅಂತ್ಯದವರೆಗೆ ‘ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್’ ಹಾಗೂ ‘ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್’ ಸಂಸ್ಥೆಗಳನ್ನು ನಡೆಸಿದರು. ಜೊತೆಗೆ ‘ಕರೆಂಟ್ ಸೈನ್ಸ್’ ಹಾಗೂ ‘ದ ಪ್ರೊಸೀಡಿಂಗ್ಸ್ ಆಫ್ ಅಕಾಡೆಮಿ’ ಎಂಬ ಪತ್ರಿಕೆಗಳ ಸಂಪಾದರೂ ಆಗಿದ್ದರು. 1970 ನವೆಂಬರ್ 21ರಂದು ಹುಟ್ಟಿದ ತಿಂಗಳಲ್ಲೇ ಮೃತರಾದ ರಾಮನ್ರನ್ನು ಅವರಿಚ್ಛೆಯಂತೆ ಯಾವುದೇ ಧಾರ್ಮಿಕ ವಿಧಿವಿಧಾನಗಳಿಲ್ಲದೆ ಸಂಸ್ಥೆಯ ಆವರಣದಲ್ಲಿ ಸಂಸ್ಕಾರ ಮಾಡಲಾಯ್ತು. ಆ ಸ್ಥಳದಲ್ಲಿ ನೆಟ್ಟ ಗಿಡ ಇಂದು ಮರವಾಗಿ ಬೆಳೆದು ಮುಂದಿನ ವಿಜ್ಞಾನಿಗಳಿಗೆ ದಾರಿನೆರಳಾಗಿ ನಿಂತಿದೆ!

ಕೊನೆಗೆ ಒಂದು ಮಾತು; ನೊಬೆಲ್ ಪ್ರಶಸ್ತಿಗೆ ಕಾರಣವಾದ ‘ರಾಮನ್ ಪರಿಣಾಮ’ವೆಂಬ ಶಬ್ದವನ್ನು ಸರ್ ಸಿ.ವಿ.ರಾಮನ್ರೇ ಹುಟ್ಟು ಹಾಕಿರಬಹುದೆಂದು ನಾವೆಲ್ಲರೂ ಅಂದುಕೊಳ್ಳುತ್ತೇವೆ. ಆದರೆ ಅಸಲಿಗೆ ಹಾಗಿಲ್ಲ. ‘ರಾಮನ್ ಪರಿಣಾಮ’ವೆಂಬ ಶಬ್ದವನ್ನು ಹೆಸರಿಸಿದ್ದು ರಾಮನ್ರಲ್ಲ, ಬದಲಿಗೆ ಅವರ ಸಹೋದ್ಯೋಗಿಗಳು!! ಎಂದರೆ ಅವರ ಸಹೋದ್ಯೋಗಿಗಳಿಗೆ ರಾಮನ್ರ ಬಗ್ಗೆ ಎಂತಹಾ ಪ್ರೀತಿ, ಗೌರವ ಇದ್ದಿರಬಹುದು ಎಂಬುದನ್ನು ತೋರುತ್ತದೆ! ಇದು ಒಬ್ಬ ದೊಡ್ಡ ವಿಜ್ಞಾನಿ ತನ್ನ ಸಹೋದ್ಯೋಗಿಗಳ ಜೊತೆಗೆ ಎಷ್ಟು ಪ್ರೀತಿಯಿಂದ ನಡೆದುಕೊಂಡಿದ್ದಿರಬಹುದು ಎಂಬುದನ್ನೂ ಸೂಚ್ಯವಾಗಿ ತಿಳಿಸುತ್ತದೆ! ದೊಡ್ಡವರ ದೊಡ್ಡತನಗಳು ಸಾಬೀತಾಗುವುದು ಅವರ ಈ ಮಹನೀಯ ಗುಣದ ವ್ಯಕ್ತಿತ್ವದಿಂದಲೇ ಅಲ್ಲವೆ?!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net