

ಪಟ್ನಾ (ಬಿಹಾರ): ಬಿಹಾರದ ಮುಖ್ಯಮಂತ್ರಿಯಾಗಿ ಎಂಟನೇ ಬಾರಿ ಅಧಿಕಾರ ಸ್ವೀಕರಿಸಿರುವ ನಿತೀಶ್ ಕುಮಾರ್ ಅವರು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದಾರೆ. ಈ ಬಗ್ಗೆ ಕೇಳೋ ಪ್ರಶ್ನೆಗಳಿಗೆ ಉತ್ತರ ನೀಡಲು ನಿರಾಕರಿಸುತ್ತಲೇ ಬಂದಿದ್ದಾರೆ ನಿತೀಶ್ ಕುಮಾರ್. ಈ ನಡುವೆಯೇ ಕುತೂಹಲದ ಘಟನೆಯೊಂದು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದಿದೆ.
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಅವರು ಪಟ್ನಾಗೆ ನಿನ್ನೆ ಬುಧವಾರ ಭೇಟಿ ಕೊಟ್ಟಿದ್ದರು. ಇಲ್ಲಿ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೊಂದಿಗೆ ಬಹು ಸಮಯದವರೆಗೆ ಚರ್ಚಿಸಿದರು. ಇದು ರಹಸ್ಯ ಮಾತುಕತೆಯಾಗಿತ್ತು. ಮಾತುಕತೆಯ ನಂತರ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಅದರಲ್ಲಿ ಕೆಲವೊಂದು ಇಂಟರೆಸ್ಟಿಂಗ್ ಘಟನೆಗಳು ನಡೆದಿವೆ.
ಸಭೆಯ ನಂತರ ಚಂದ್ರಶೇಖರ ರಾವ್, ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಮೂವರೂ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕೆ. ಚಂದ್ರಶೇಖರ ರಾವ್ ಅವರು 'ಬಿಜೆಪಿ -ಮುಕ್ತ ಭಾರತ'ವೇ ನಮ್ಮ ಗುರಿಯಾಗಿದೆ ಎಂದರು. ಆ ತಕ್ಷಣ ಪತ್ರಕರ್ತರು ಹಾಗಿದ್ದರೆ ನಿತೀಶ್ ಕುಮಾರ್ ನಿಮ್ಮ ಪ್ರಧಾನಿ ಅಭ್ಯರ್ಥಿಯೇ ಎಂದು ಪ್ರಶ್ನಿಸಿದರು.
ಈ ಪ್ರಶ್ನೆಗೆ ಕೆಸಿಆರ್ ಏನನ್ನೋ ಹೇಳಲು ಮುಂದಾದರು. ಪ್ರಧಾನಿ ಅಭ್ಯರ್ಥಿ ಎಂಬ ಪ್ರಶ್ನೆ ಕೇಳುತ್ತಲೇ ತಮಗೆಲ್ಲಿ ಈ ಪ್ರಶ್ನೆ ಕೇಳಿಬಿಡುತ್ತಾರೆ ಎಂದೋ ಏನೋ, ಕೂಡಲೇ ನಿತೀಶ್ ಕುಮಾರ್ ಕುರ್ಚಿ ಬಿಟ್ಟು ಎದ್ದು ನಿಂತರು. ಈ ಸಮಯದಲ್ಲಿ ಕುಳಿತುಕೊಳ್ಳುವಂತೆ ಕೆಸಿಆರ್ ಅವರ ಕುರ್ತಾ ಎಳೆದರು.
ಆದರೆ ನಿತೀಶ್ ಕುಮಾರ್ ಮಾತ್ರ ಕುಳಿತುಕೊಳ್ಳಲಿಲ್ಲ. ಕೆಸಿಆರ್ ಹಲವು ನಿಮಿಷ ಮಾತನಾಡುತ್ತಿದ್ದರೂ ನಿತೀಶ್ ನಿಂತುಕೊಂಡೇ ಇದ್ದರು. ಕೊನೆಗೆ ಕೆಸಿಆರ್ ಅವರು, ನಿತೀಶ್ ಕುಮಾರ್ ಕೈ ಹಿಡಿದು ಎಳೆಯುತ್ತಾ, ಕುರ್ತಾ ಎಳೆಯುತ್ತಾ ಇದ್ದರೂ ಅವರು ಮಾತ್ರ ಕುಳಿತುಕೊಳ್ಳಲಿಲ್ಲ, ನಿತೀಶ್ ಜೀ ಕುಳಿತುಕೊಳ್ಳಿ ಎಂದರೂ ಕೇಳಲಿಲ್ಲ. ಬದಲಿಗೆ ನಗುತ್ತಲೇ ಇದ್ದರು. ಇದು ಏಕೆ ಎಂಬ ಬಗ್ಗೆ ಮಾತ್ರ ಅವರು ಬಾಯಿ ಪಿಟಕ್ ಎನ್ನದೇ ನಗು ಮುಂದುವರೆಸಿದ್ದರು.
ನೀವು ನಿಂತುಕೊಂಡರೆ ನೋಡಲು ಆಗುವುದಿಲ್ಲ, ಕುಳಿತುಕೊಳ್ಳಿ ಎಂದು ಕೆಸಿಆರ್ ಹೇಳಿದಾಗ, ಗೋಷ್ಠಿ ಸಾಕು, ಬನ್ನಿ. ಹೋಗೋಣ. ಪತ್ರಕರ್ತರು ಮೂರ್ಖ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ, ಯಾಕೆ ಉತ್ತರಿಸುತ್ತೀರಾ ಎಂದು ಹೇಳಿದರು. ಆದರೂ ಪಟ್ಟು ಬಿಡದ ಕೆಸಿಆರ್ ಅವರ ಮಾತಿಗೆ ಮಣಿದು ಸ್ವಲ್ಪ ಹೊತ್ತು ಕುರ್ಚಿಯ ಮೇಲೆ ಕುಳಿತುಕೊಂಡರು.
ಆಗ ಪಕ್ಕದಲ್ಲಿಯೇ ಇದ್ದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ನಿತೀಶ್ ಅವರ ಕಿವಿಯಲ್ಲಿ ಏನೋ ಹೇಳಿದರು. ಇಬ್ಬರೂ ಜೋರಾಗಿ ನಕ್ಕರು. ಅವರು ಕುಳಿತುಕೊಂಡಿದ್ದರಿಂದ ಪತ್ರಕರ್ತರು ಪ್ರಶ್ನೆ ಮುಂದುವರೆಸಿದರು. 2024ರಲ್ಲಿ ಕಾಂಗ್ರೆಸ್ ಮತ್ತು ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಕೇಳಿದರು. ಆಗ ನಿತೀಶ್ ಕುಮಾರ್ ಎದ್ದುನಿಂತು ಈಗ ಪತ್ರಿಕಾಗೋಷ್ಠಿಯನ್ನು ಮುಗಿಸುತ್ತಿದ್ದೇವೆ ಎಂದು ಹೇಳಿ ನಡೆದೇ ಬಿಟ್ಟರು. (ಏಜೆನ್ಸೀಸ್)
ಇಲ್ಲಿದೆ ನೋಡಿ ವಿಡಿಯೋ: