

ಅವನನ್ನು ಸಂತೋಷ ಪಡಿಸಲು ಸಾಧ್ಯವೇ ಇಲ್ಲ. ವಾರಗಟ್ಟಲೆ ಮಾತು ಬಿಡುತ್ತಾನೆ. ನಾನು ತವರಿಗೆ ಬಂದರೆ ಬಂದ ಮರುದಿನವೇ ವಾಪಸ್ಸು ಬಾ ಎಂದು ನೂರು ಫೋನು ಮಾಡುತ್ತಲೇ ಇರುತ್ತಾನೆ. ನಾನು ಫೋನು ಮಾಡಿದರೆ ಮಾತೇ ಆಡುವುದಿಲ್ಲ. ಅವನಿಗೆ ಸಂತೋಷವಾಗಲಿ ಎಂದು ನಾನು ತಪ್ಪು ಮಾಡದೇ ಇದ್ದರೂ, ನನ್ನದೇ ತಪ್ಪು ಎಂದು ಒಪ್ಪಿಕೊಂಡರೂ ಕಾಲು ಹಿಡಿ ಎನ್ನುತ್ತಾನೆ. ಗಂಟೆಗಟ್ಟಲೆ ನಾನು ಅವನ ಕಾಲು ಹಿಡಿದೇ ಕೂತಿರಬೇಕು. ಕೆಟ್ಟ ಪದಗಳಿಂದ ಬಯ್ಯುತ್ತಾನೆ. ನನ್ನ ಸಂಬಳವೆಲ್ಲಾ ಅವನಿಗೇ ಖರ್ಚು ಮಾಡಿದರೂ ಅವನಿಗೆ ಸಮಾಧಾನವಿಲ್ಲ. “ ನನ್ನ ಮಗನನ್ನು ಖುಷಿಯಾಗಿ ಇಡುವುದು ನಿನ್ನ ಧರ್ಮ” ಎಂದು ಅವನ ತಾಯಿಯೂ ಹೇಳುತ್ತಾರೆ. ನಾನೀಗ ತವರಿನಲ್ಲಿ ಇದ್ದೇನೆ. ನನಗೆ ಗಂಡನ ಮನೆಗೆ ಹೋಗಲು ಹೆದರಿಕೆ ಹಾಗೂ ಇಷ್ಟವೇ ಇಲ್ಲ. ಈಗ ವಿಚ್ಛೇದನ ಪಡೆಯಲು ನಾನೇನು ಮಾಡಬೇಕು ತಿಳಿಯುತ್ತಿಲ್ಲ.
ಉತ್ತರ: ಮದುವೆಯಾದ ಮೊದಲ ವರ್ಷದಲ್ಲಿ ವಿಚ್ಛೇದನಕ್ಕೆ ಪ್ರಕರಣ ದಾಖಲಿಸಲು ಆಗುವುದಿಲ್ಲ. ವಿಶೇಷ ಸಂದರ್ಭಗಳಿದ್ದರೆ, ಕಲಂ 14ರಂತೆ ನ್ಯಾಯಾಲಯದ ಅನುಮತಿ ಪಡೆದು ದಾಖಲಿಸಬೇಕು. ಗಂಡ ಏನು ಮಾಡಿದರೂ ಖುಷಿ ಆಗುವುದಿಲ್ಲ ಎಂದರೆ ನೀವೂ ಏನು ಮಾಡಲು ಸಾಧ್ಯವಿಲ್ಲ. ಬರೀ ಗಂಡನನ್ನು ಹೆಂಡತಿ ಖುಷಿಯಾಗಿ ಇಡುವುದಲ್ಲ, ಹೆಂಡತಿಯನ್ನೂ ಗಂಡ ಸಂತೋಷದಿಂದ ಇರುವಂತೆ ನೋಡಿಕೊಳ್ಳಬೇಕು ಎನ್ನುವುದರ ಅರಿವು ಗಂಡನಿಗೂ ಇರಬೇಕು. ಹೆಂಡತಿ ತನ್ನ ಕೆಲಸದಾಳು ಅಲ್ಲ. ತಾನು ಹೇಳಿದಂತೆಯೇ ಅವಳು ನಿಲ್ಲಬೇಕು ಕೂರ ಬೇಕು ಎನ್ನುವುದನ್ನು ನಿರೀಕ್ಷಿಸಬಾರದು ಎನ್ನುವ ಪ್ರಜ್ಞೆ ಗಂಡನಿಗೂ ಇರಬೇಕು.
ನೀವು ಹೆದರಬೇಕಾಗಿಲ್ಲ . ನಿಮಗೆ ಇಷ್ಟವಿಲ್ಲದಿದ್ದರೆ, ಕಷ್ಟ ಎನಿಸಿದರೆ , ನೀವು ನಿಮ್ಮ ಗಂಡನ ಮನೆಗೆ ಹೋಗಬೇಡಿ. ನಿಮಗೆ ಏನೇನು ತೊಂದರೆ ಆಗುತ್ತಿದೆ , ಯಾವ ಕಾರಣಗಳಿಂದ ನೀವು ಅಲ್ಲಿಗೆ ಹೋಗಲು ಇಷ್ಟ ಪಡುತ್ತಿಲ್ಲ ಎನ್ನುವುದನ್ನು ನೋಟಿಸ್ ಮೂಲಕ , ಅಥವಾ ನೀವೇ ಅವರಿಗೆ ಖುದ್ದಾಗಿ ಬರೆದು ತಿಳಿಸಿಬಿಡಿ. ಒಂದು ವರ್ಷ ಆದ ಮೇಲೆ ವಿಚ್ಛೇದನಕ್ಕೆ ಪ್ರಕರಣ ದಾಖಲಿಸಿ. ಅವರೂ ಒಪ್ಪಿದರೆ, ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಪ್ರಕರಣ ಹಾಕಿದರೆ, ಆರು ತಿಂಗಳ ನಂತರ ಏಳನೇ ತಿಂಗಳಲ್ಲಿಯೇ ನಿಮಗೆ ವಿಚ್ಛೇದನ ಸಿಗುವ ಸಾಧ್ಯತೆಗಳು ಇರುತ್ತವೆ.