

ಅಹಮದಾಬಾದ್: ಮದುವೆ ಎನ್ನುವುದು ಸ್ವರ್ಗದಲ್ಲಿಯೇ ಆಗುತ್ತದೆ ಎಂದು ತಲೆತಲಾಂತರಗಳಿಂದ ಬಂದಿರುವ ಮಾತು. ಕೆಲವು ಮದುವೆಗಳನ್ನು ನೋಡಿದಾಗ ನಿಜಕ್ಕೂ ಈ ಮಾತು ಸತ್ಯವೇ ಎಂದು ಎನ್ನಿಸದೇ ಇರಲಾರದು.
ಅಂಥದ್ದೇ ಒಂದು ಜೋಡಿ ಇದು. ಗುಜರಾತಿನ ಜುನಾಗಢ ನಗರದಲ್ಲಿ ಈ ವಿಶೇಷ ಮದುವೆ ನಡೆದಿದೆ. ಇದಕ್ಕೆ ಕಾರಣ 29 ವರ್ಷದ ಮದುಮಗಳು ಶಾಂತಾ 5.5 ಅಡಿ ಎತ್ತರವಿದ್ದರೆ 41 ವಯಸ್ಸಿನ ರಮೇಶ್ ಮೂರು ಅಡಿ ಇದ್ದಾರೆ. ಇವರಿಬ್ಬರ ಮದುವೆ ನಡೆದಿದೆ.
ಶಾಂತಾ ಹುಟ್ಟು ಅಂಧೆಯಾಗಿದ್ದು ಸೇವಾ ಯುವಕ ಮಂಡಳಿಯ ಯುವತಿಯರ ಹಾಸ್ಟೆಲ್ನಲ್ಲಿದ್ದರು. ಇವರು ಬಿ.ಎಡ್ ಪದವೀಧರೆ. ಅವರ ಅಂಧತ್ವ ಕಾರಣದಿಂದ ಮದುವೆಯಾಗಿರಲಿಲ್ಲ. ಶಿಕ್ಷಕರಾಗಿರುವ ರಮೇಶ್ ಅವರಿಗೆ ವಯಸ್ಸು 40 ದಾಟಿದ್ದರೂ ಅವರ ಎತ್ತರದಿಂದಾಗಿ ಮದುವೆಯಾಗಲಿಲ್ಲ.
ನಂತರ ಇವರಿಬ್ಬರಿಗೂ ಕಂಕಣಯೋಗ ಕೂಡಿ ಬಂದಿತ್ತು. ಇದೀಗ ಇವರು ದಂಪತಿಯಾಗಿದ್ದಾರೆ. ಮದುವೆಗೆ ಆಗಮಿಸಿದ ಅತಿಥಿಗಳು ನವಜೋಡಿಗೆ ಶುಭ ಹಾರೈಸಿದ್ದಾರೆ. ಇವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.