

ನವದೆಹಲಿ: ಸೋನಿಯಾ ಗಾಂಧಿ ಅವರ ತಾಯಿ ಪಾವ್ಲಾ ಮೈನೋ ಇಟಲಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಇದೇ 27ರಂದು ಅವರು ನಿಧನರಾಗಿದ್ದು, ನಿನ್ನೆ (ಮಂಗಳವಾರ) ಅಂತಿಮ ವಿಧಿವಿಧಾನ ಮುಗಿದಿರುವುದಾಗಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಸದ್ಯ ಸೋನಿಯಾಗಾಂಧಿ ಅವರು ತಮ್ಮ ಮಕ್ಕಳಾದ ಪ್ರಿಯಾಂಕಾ ಮತ್ತು ರಾಹುಲ್ ಜತೆ ವಿದೇಶದಲ್ಲಿದ್ದಾರೆ. ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ತೆರಳುತ್ತಿರುವುದಾಗಿ ಪಕ್ಷದ ಮೂಲಗಳು ಹೇಳಿದ್ದವು. ಆದರೆ ಅವರು ಯಾವ ದೇಶದಲ್ಲಿ ಇದ್ದಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಲಿಲ್ಲ.
ಇದೇ ವೇಳೆ ಸೋನಿಯಾ ಅವರಿಗೆ ಮಾತೃವಿಯೋಗವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಸೋನಿಯಾ ಅವರು, ಆಗಸ್ಟ್ 23ರಂದು ಭೇಟಿಯಾಗಿ ಹೋಗಿದ್ದರು ಎನ್ನಲಾಗಿದೆ.
ಆಗಸ್ಟ್ 28ರಂದು ನಡೆದ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ವಿದೇಶದಿಂದಲೇ ಆನ್ಲೈನ್ ಮೂಲಕ ಸೋನಿಯಾ, ರಾಹುಲ್ ಹಾಗೂ ಪ್ರಿಯಾಂಕಾ ಭಾಗವಹಿಸಿದ್ದರು. ಅಂದಿನ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯ ಚುನಾವಣಾ ದಿನಾಂಕಕ್ಕೆ ಅನುಮೋದನೆ ನೀಡಲಾಗಿತ್ತು. ಸೆಪ್ಟೆಂಬರ್ 4ರಂದು ದೆಹಲಿಯಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜಿಸಲಾಗಿದ್ದು, ಅಷ್ಟರ ಒಳಗೆ ಸೋನಿಯಾ ಕುಟುಂಬ ದೆಹಲಿಗೆ ವಾಪಸ್ ಆಗಬಹುದು ಎನ್ನಲಾಗಿದೆ. (ಏಜೆನ್ಸೀಸ್)