

ಪಣಜಿ (ಗೋವಾ): ಕಳೆದ ಆಗಸ್ಟ್ 23ರಂದು ನಿಗೂಢವಾಗಿ ಮೃತಪಟ್ಟ ಬಿಜೆಪಿ ನಾಯಕಿ ಸೊನಾಲಿ ಫೋಗಟ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ನಿರ್ಧಾರವೊಂದನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪ್ರಕಟಿಸಿದ್ದಾರೆ. ಸೋನಾಲಿ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಅವರು ಆದೇಶ ಹೊರಡಿಸಿದ್ದಾರೆ.
ಸೋನಾಲಿ ಅವರು ಸ್ನೇಹಿತರ ಜತೆ ಗೋವಾ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಅವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ ಎಂದು ಮೊದಲಿಗೆ ನಂಬಲಾಗಿತ್ತು. ಆದರೆ ಅವರ ದೇಹದಲ್ಲಿ ಹಲವಾರು ಗಾಯಗಳಾಗಿರುವುದು ಮರಣೋತ್ತರ ಪರೀಕ್ಷೆ ವರದಿಯಿಂದ ಗೊತ್ತಾದ ಬಳಿಕ ಈ ಪ್ರಕರಣ ಕುತೂಹಲದ ತಿರುವು ಪಡೆದುಕೊಂಡಿತ್ತು.
ಇಷ್ಟೇ ಅಲ್ಲದೇ, ಗೋವಾದ ರೆಸ್ಟೊರೆಂಟ್ ಕಂ ನೈಟ್ಕ್ಲಬ್ನಲ್ಲಿ ನಡೆದ ಪಾರ್ಟಿಯಲ್ಲಿ ಕೂಡ ಇವರು ಭಾಗವಹಿಸಿದ್ದು ಸಿಸಿಟಿವಿ ಫುಟೇಜ್ನಿಂದ ಬಹಿರಂಗಗೊಂಡಿತ್ತು. ಅದೇ ದಿನ ಸೋನಾಲಿ ಆಪ್ತರಾದ ಸುಧೀರ್ ಸಾಂಗ್ವಾನ್ ಮತ್ತು ಸುಖ್ವಿಂದರ್ ಸಿಂಗ್ ಅವರು ನೀರಿನಲ್ಲಿ ಕೆಲ ಪದಾರ್ಥವನ್ನು ಬೆರೆಸಿ, ಬಲವಂತವಾಗಿ ಸೋನಾಲಿ ಅವರಿಗೆ ಕುಡಿಸಿರುವುದು ಸಿಸಿಟಿವಿಯಿಂದ ತಿಳಿದುಬಂದಿತ್ತು. ಆ ಬಳಿಕ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರು ಕೂಡ ತಪ್ಪು ಒಪ್ಪಿಕೊಂಡಿದ್ದರು.
ಈ ನಡುವೆ, ತಮ್ಮ ಪುತ್ರಿಯ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಅವರ ಪಾಲಕರು ಆಗ್ರಹಿಸಿದ್ದರು. ಗೋವಾ ಹೈಕೋರ್ಟ್ನಲ್ಲಿಯೂ ಅವರು ಅರ್ಜಿ ಸಲ್ಲಿಸಿದ್ದರು, ಜತೆಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಯು.ಯು.ಲಲಿತ್ ಅವರಿಗೂ ಪತ್ರ ಬರೆದಿದ್ದರು. ಇದೀಗ ಗೋವಾ ಸಿಎಂ ಈ ಆದೇಶ ಪ್ರಕಟಿಸಿದ್ದಾರೆ.
ಟಿಕ್ ಟಾಕ್ ಮೂಲಕ ಜನಪ್ರಿಯತೆ ಗಳಿಸಿದ್ದ ಸೋನಾಲಿ ಫೋಗಟ್ ಹರಿಯಾಣದ ಹಿಸಾರ್ ಮೂಲದವರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹರಿಯಾಣದ ಆದಂಪುರ ಕ್ಷೇತ್ರದಿಂದ ಬಿಜೆಪಿಯ ಟಿಕೆಟ್ ಪಡೆದು ಕುಲದೀಪ್ ಬಿಷ್ಣೋಯ್ ವಿರುದ್ಧ ಸ್ಪರ್ಧಿಸಿದ್ದರು. ಅವರು 2020ರಲ್ಲಿ ಬಿಗ್ ಬಾಸ್ ರಿಯಾಲಿಟಿ ಷೋನಲ್ಲಿ ಕೂಡ ಭಾಗವಹಿಸಿದ್ದರು. (ಏಜೆನ್ಸೀಸ್)