

ಕೋಲ್ಕತಾ: ತಂದೆಯ ಮೃತದೇಹದೊಂದು ವ್ಯಕ್ತಿಯೊಬ್ಬ ಮೂರು ತಿಂಗಳು ವಾಸವಾಗಿದ್ದ ಭಯಾನಕ ಘಟನೆ ಕೋಲ್ಕತಾದಲ್ಲಿ ನಡೆದಿದೆ. 70 ವರ್ಷದ ಸಂಗ್ರಾಮ್ ಡೇ ಎಂಬುವವರು 40 ವರ್ಷದ ಮಗ ಕೌಶಿಕ್ ಇಂಥದ್ದೊಂದು ಕೃತ್ಯ ಎಸಗಿದ್ದು, ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ.
ಮುಂಬೈನ ಬಾಬಾ ಅಟೋಮಿಕ್ ರಿಸರ್ಚ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ಸಂಗ್ರಾಮ್ ಡೇ ಅವರು ವಯೋಸಹಜ ಸಮಸ್ಯೆಯಿಂದ ಮೃತಪಟ್ಟಿದ್ದರು. ಅವರ ಮಗ ಮಾನಸಿಕ ಸ್ಥಿಮಿತ ಕಳೆದುಕೊಂಡುಬಿಟ್ಟಿದ್ದ. ಮನೆಯಲ್ಲಿ ಸಂಗ್ರಾಮ್ ಅವರ ಪತ್ನಿ ಅರುಣಾ ಇದ್ದರು. ಆದರೆ ಅವರು ವಿಪರೀತ ಅನಾರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದಿದ್ದು, ಅವರಿಗೂ ಈ ವಿಷಯವೇ ಗೊತ್ತಿರಲಿಲ್ಲ. ಮಗ ಕೂಡ ಈ ವಿಷಯವನ್ನು ತಾಯಿಗೆ ತಿಳಿಸದೇ ಇಲ್ಲ. ಆದರೆ ಏನು ಮಾಡಬೇಕು ಎಂದು ತಿಳಿಯದೇ, ಶವ ಅಂತ್ಯಕ್ರಿಯೆಯನ್ನೂ ನಡೆಸಲು ಗೊತ್ತಾಗದೇ ಅದರ ಜತೆಗೇ ಮೂರು ತಿಂಗಳು ಕಾಲ ಕಳೆದಿದ್ದಾನೆ!
ಮನೆಯಿಂದ ಕೊಳೆತ ವಾಸನೆ ಹಾಗೂ ಸಂಗ್ರಾಮ್ ಮನೆಯಿಂದ ಹೊರಕ್ಕೆ ಬರದ್ದನ್ನು ಕಂಡ ಜನರು ಮನೆಗೆ ಹೋಗಿ ನೋಡಿದಾಗಲೇ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಅವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಶವವು ಕೊಳೆತು ಅಸ್ಥಿಪಂಜರ ಮಾತ್ರ ಉಳಿದುಕೊಂಡಿತ್ತು. ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈತ ಸತ್ತು ಮೂರು ತಿಂಗಳ ಮೇಲಾಗಿದೆ ಎನ್ನಿಸುತ್ತಿದೆ. ಸಹಜ ಸಾವು ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಆದರೆ ಪೋಸ್ಟ್ ಮಾರ್ಟಮ್ ರಿಪೋರ್ಟ್ ಬಂದ ನಂತರ ಎಲ್ಲದ್ದಕ್ಕೂ ಉತ್ತರ ಸಿಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಮೂರು ತಿಂಗಳು ಪತ್ನಿಗೂ ವಿಷಯ ತಿಳಿಯದಿದ್ದುದು ಹೇಗೆ? ಇಷ್ಟು ದಿನ ಅವರು ಏನು ಮಾಡುತ್ತಿದ್ದರು ಇತ್ಯಾದಿಗಳ ಬಗ್ಗೂ ತನಿಖೆಯಿಂದ ಗೊತ್ತಾಗಬೇಕಿದೆ ಎಂದಿದ್ದಾರೆ.