

ನವದೆಹಲಿ: ದೆಹಲಿಯ ವಿಜಯ್ ಚೌಕ್ ಎದುರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಇಂದು ಬಂಧಿಸಿದೆ.
ತಾನು ಜಮ್ಮು-ಕಾಶ್ಮೀರದ ಬದ್ಗಾಮ್ ಜಿಲ್ಲೆಯವನು ಎಂದು ತಿಳಿಸಿದ್ದು, ಸಂಸತ್ ಭವನದ ಸುತ್ತಮುತ್ತ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ. ಈತನ ಬಳಿ ಎರಡು ಐಡಿ ಕಾರ್ಡ್‌ಗಳು ಸಿಕ್ಕಿದ್ದು, ಎರಡರಲ್ಲಿಯೂ ಬೇರೆ ಬೇರೆ ಹೆಸರು ಇರುವುದು ಈತನ ಬಗ್ಗೆ ಸಂದೇಹ ಹುಟ್ಟುಹಾಕಿದೆ. ಡ್ರೈವಿಂಗ್ ಲೈಸೆನ್ಸ್ ನಲ್ಲಿ ಫಿರ್ದೌಸ್ ಎಂದಿದ್ದರೆ, ಆಧಾರ್ ಕಾರ್ಡ್‌ನಲ್ಲಿ ಮಂಝೂರ್ ಅಹ್ಮದ್ ಎಂದಿದೆ!
ಮಾತ್ರವಲ್ಲದೇ ತನ್ನ ಹೇಳಿಕೆಯನ್ನು ಪದೇ ಪದೇ ಬದಲಾಯಿಸುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಈ ವ್ಯಕ್ತಿ ಸಿಆರ್ ಪಿಎಫ್ ಗೆ ದಾರಿ ತಪ್ಪಿಸುವ ಮಾಹಿತಿ ನೀಡಿದ್ದ. ಬಂಧಿಸಿದ ವೇಳೆ ಆತನಿಂದ ವಶಪಡಿಸಿಕೊಂಡ ದಾಖಲೆಯಲ್ಲಿ ಕೆಲವು ಮಾಹಿತಿ ಕೋಡ್ ವರ್ಡ್‌ಗಳನ್ನು ಇರುವುದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ.
ಸೆಪ್ಟೆಂಬರ್ 14ರಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಲಿದೆ, ಅಕ್ಟೋಬರ್ 1ರವರೆಗೆ ಇರಲಿದೆ, ಶನಿವಾರ ಭಾನುವಾರ ಕೂಡ ರಜೆ ಇರುವುದಿಲ್ಲ, ದಿನಕ್ಕೆ 4 ಗಂಟೆಗಳು ಮಾತ್ರ ಕಲಾಪ ನಡೆಯಲಿದೆ. ಈ ಅವಧಿಯಲ್ಲಿ ಈತ ಇಲ್ಲಿಗೆ ಸಂಚರಿಸುತ್ತಿರುವ ಹಿಂದಿನ ಕಾರಣವನ್ನು ತನಿಖಾ ಸಿಬ್ಬಂದಿ ಪತ್ತೆ ಹಚ್ಚುತ್ತಿದ್ದಾರೆ. ಸಂಸತ್ ಭವನಕ್ಕೆ ದಾಳಿ ನಡೆಸಲು ಈಗ ಸ್ಕೆಚ್ ಹಾಕುತ್ತಿದ್ದನೆ? ಈತನ ಬಳಿ ಇರುವ ಕೋಡ್ ವರ್ಡ್ಸ್‌ಗಳು ಏನು ಹೇಳುತ್ತಿವೆ ಎಂಬ ಬಗ್ಗೆ ತನಿಖೆ ಶುರುವಾಗಿದೆ.
ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಈತ ಜಮ್ಮು-ಕಾಶ್ಮೀರದ ಬದ್ಗಾಮ್ ಜಿಲ್ಲೆಯ ಬೀರ್ವಾದವ. ತನಿಖೆಯ ವೇಳೆ ಮೊದಲು ಈತ 2016ರಲ್ಲಿ ತಾನು ದೆಹಲಿಗೆ ಬಂದಿರುವುದಾಗಿ ತಿಳಿಸಿದ್ದ. ನಂತರ ಹೇಳಿದ್ದು…ನಾನು ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ದೆಹಲಿಗೆ ಬಂದಿರುವುದಾಗಿ ಮಾಹಿತಿ ನೀಡಿದ್ದಾನೆ. ಈತ ಯಾರು ಎಂಬ ಬಗ್ಗೆ ಇನ್ನಷ್ಟೇ ಸ್ಪಷ್ಟ ಗುರುತು ತಿಳಿದುಬರಬೇಕಾಗಿದೆ.
ಸದ್ಯ ಈತನ್ನು ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಅಲ್ಲಿ ಪಾರ್ಲಿಮೆಂಟ್ ಹೌಸ್ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಪಡಿಸಲಿದ್ದಾರೆ. ಈಗಾಗಲೇ ಕಲೆ ಹಾಕಿದ್ದ ಮಾಹಿತಿಯನ್ನು ವಿವಿಧ ಏಜೆನ್ಸಿ (ಗುಪ್ತಚರ ಇಲಾಖೆ)ಗಳ ಜತೆ ಹಂಚಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.